ನಗರ ಪಾಲಿಕೆಯಲ್ಲಿ ಇಂದು ಕರ್ನಾಟಕ ರಾಜ್ಯೋತ್ಸವ

ನಗರ ಪಾಲಿಕೆಯಲ್ಲಿ ಇಂದು ಕರ್ನಾಟಕ ರಾಜ್ಯೋತ್ಸವ

ಮಹಾನಗರ ಪಾಲಿಕೆ, ಕನ್ನಡ ಪರ ಸಂಘ-ಸಂಸ್ಥೆಗಳು ಮತ್ತು ಪತ್ರಕರ್ತರ ಸಂಯು ಕ್ತಾಶ್ರಯದಲ್ಲಿ ಮಹಾ ನಗರಪಾಲಿಕೆ ಆವರಣದ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂದಿರದಲ್ಲಿ  ಇಂದಿನಿಂದ ಮೂರು ದಿನ 69ನೇ ಕನ್ನಡ ರಾಜ್ಯೋತ್ಸವ ನಡೆಯಲಿದೆ ಎಂದು ಪಾಲಿಕೆಯ ಮೇಯರ್‌ ಕೆ. ಚಮನ್‌ಸಾಬ್‌ ತಿಳಿಸಿದರು.

ಇಂದು ಬೆಳಿಗ್ಗೆ 9.30ಕ್ಕೆ ಪಾಲಿಕೆ ಆವರಣದಲ್ಲಿ ಮೇಯರ್‌ ಚಮನ್‌ ಸಾಬ್‌ ಕನ್ನಡ ಧ್ವಜಾರೋಹಣ ನೆರವೇರಿಸುವರು. ತದನಂತರ ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ್‌ ಹಾಗೂ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಭುವನೇಶ್ವರಿ ದೇವಿಯ ಭವ್ಯ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಶ್ರೀ ಭುವನೇಶ್ವರಿ ಮೆರವಣಿಗೆ ಮಾರ್ಗ : ಮಹಾನಗರ ಪಾಲಿಕೆಯಿಂದ  ಆರಂಭಗೊಳ್ಳುವ ಮೆರವಣಿಗೆಯು ಜಯದೇವ ಮುರುಘರಾಜೇಂದ್ರ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್‌ ವೃತ್ತ, ಪಿ.ಜೆ. ಬಡಾವಣೆ 4ನೇ ಮುಖ್ಯ ರಸ್ತೆ ಮುಖಾಂತರ ಹರಳೆಣ್ಣೆ ಕೊಟ್ರಬಸಪ್ಪ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ,  ಶ್ರೀ ವೀರ ಮದಕರಿ ನಾಯಕ ವೃತ್ತ, ಕೆರೆ ಗರಡಿ ಮನೆ ಮುಂದಿನ ರಸ್ತೆಯಿಂದ ದೊಡ್ಡಪೇಟೆ, ವಿಜಯಲಕ್ಷ್ಮಿ ರಸ್ತೆ, ಗಡಿಯಾರ ಕಂಬ ಮಾರ್ಗವಾಗಿ ಮಹಾನಗರ ಪಾಲಿಕೆ ಆವರಣ ತಲುಪುವುದು.

ಪಾಲಿಕೆ ಆಯುಕ್ತರಾದ ರೇಣುಕಾ, ಉಪಮೇಯರ್‌ ಸೋಗಿ ಶಾಂತಕುಮಾರ್‌, ಸಮರ್ಥ ಶಾಮನೂರು, ವಿಶ್ವಪರ್ಯಟನಾಗಾರ ಮಹಮ್ಮಸ್‌ ಸಿನಾನ್‌ ಸೇರಿದಂತೆ ಗಣ್ಯರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.

ನಂತರ ಸಂಜೆ 5.30ಕ್ಕೆ ರಾಜ್ಯೋತ್ಸವ ಸಮಾರಂಭ ನಡೆಯಲಿದ್ದು, ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸುವರು. ಹೆಬ್ಬಾಳು ವಿರಕ್ತ ಮಠದ ಮಹಾಂತ ರುದ್ರೇಶ್ವರ ಶ್ರೀಗಳು, ಇಸ್ಲಾಂ ಗುರುಗಳಾದ ಜೈನೀ ಕಾಮೀಲ್‌ ಸಖಾಫಿ ಮತ್ತು ಕ್ರೈಸ್ತ ಧರ್ಮದ ಗುರುಗಳಾದ ಆಂಟೋನಿ ನಜರತ್‌ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಉಪನ್ಯಾಸ ನೀಡಲಿದ್ದು, ಶಾಸಕ ಕೆ.ಎಸ್‌. ಬಸವಂತಪ್ಪ, ಸೋಗಿ ಶಾಂತಕುಮಾರ್‌, ಸುರೇಶ್‌ ಬಿ. ಇಟ್ನಾಳ್‌ ಸೇರಿದಂತೆ ಗಣ್ಯರು ಭಾಗವಹಿಸುವರು.

ಸಭಾ ಕಾರ್ಯಕ್ರಮದ ಬಳಿಕ ರಾತ್ರಿ 8ಕ್ಕೆ ಹಾಸ್ಯ ನಟ ಸಾಧು ಕೋಕಿಲ ಮತ್ತು ಗಿಚ್ಚಿಗಿಲಿಗಿಲಿ ತಂಡದ ಗೊಬ್ರಗಾಲ ಮಂಜು ಅವರಿಂದ ಮನರಂಜನೆ ಕಾರ್ಯಕ್ರಮ ನಡೆಯಲಿದೆ.

error: Content is protected !!