ನವೀಕೃತ ತಾಲ್ಲೂಕು ಕಚೇರಿ ಉದ್ಘಾಟನೆಗೆ ಆಗ್ರಹಿಸಿ ವಿಕರವೇ ಪ್ರತಿಭಟನೆ

ನವೀಕೃತ ತಾಲ್ಲೂಕು ಕಚೇರಿ ಉದ್ಘಾಟನೆಗೆ ಆಗ್ರಹಿಸಿ ವಿಕರವೇ ಪ್ರತಿಭಟನೆ

ದಾವಣಗೆರೆ, ನ. 26- ನವೀಕರಣಗೊಂಡಿರುವ ತಾಲ್ಲೂಕು ಕಚೇರಿಯನ್ನು ಕೂಡಲೇ ಉದ್ಘಾಟಿಸುವಂತೆ ಆಗ್ರಹಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯ ಕರ್ತರು ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು, ತಾಲ್ಲೂಕು ಕಚೇರಿಯ ಕಟ್ಟಡ ಕಾಮಗಾರಿ ಆರಂಭಿಸಿ 8 ವರ್ಷಗಳಾಗಿವೆ. ಕಳೆದ ಎರಡು ವರ್ಷಗಳ ಹಿಂದೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಪೀಠೋಪಕರಣಗಳನ್ನು ಕೂಡ ಕಟ್ಟಡದಲ್ಲಿ ಅಳವಡಿಸಲಾಗಿದೆ. ಆದರೆ ಇದುವರೆಗೂ ಸಾರ್ವಜನಿಕರ ಉಪಯೋಗಕ್ಕೆ ಬಿಡುಗಡೆ ಮಾಡದೇ ಬಾಡಿಗೆ ಕಟ್ಟಡ ರೈತ ಭವನದಲ್ಲಿ ಇನ್ನೂ ಬಾಡಿಗೆ ಪಾವತಿಸುತ್ತಾ ಹಣ ವ್ಯರ್ಥಮಾಡುತ್ತಾ ಇದ್ದಾರೆಂದು ಆರೋಪಿಸಿದರು.

ಉದ್ಘಾಟನೆಯಾಗದೇ ಇರುವ ಈ ನೂತನ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ನೂತನ ಕಟ್ಟಡ ಸೋರುತ್ತಿರುವುದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಕಟ್ಟಡ ಉದ್ಘಾಟನೆಯಾಗದೇ ವಿಳಂಬ ನೀತಿ ಅನುಸರಿಸುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದರು.

ನಗರದ ಹೃದಯಭಾಗದಲ್ಲಿರುವ ಈ ನೂತನ ಕಟ್ಟಡದಿಂದ ಹಳೇ ಭಾಗದ, ಗ್ರಾಮಾಂತರ ಪ್ರದೇಶದ ಜನರಿಗೆ ತುಂಬಾ ಅನುಕೂಲಕರವಾಗಿದೆ. ಇಂತಹ ಸೂಕ್ತ ಸ್ಥಳವನ್ನು ಬಿಟ್ಟು ಬಾಡಿಗೆ ಕಟ್ಟಡದಲ್ಲಿ ಎಷ್ಟು ದಿನ ಇರುವುದು ಎಂಬ ಪ್ರಶ್ನೆ ನಾಗರಿಕರನ್ನು ಕಾಡುತ್ತಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳಾದ ಬಾಬುರಾವ್, ಮಂಜುನಾಥ್, ಇಸ್ಮಾಯಿಲ್, ಜಬೀವುಲ್ಲಾ, ಚಂದ್ರಶೇಖರ್, ಮೆಹಬೂಬ್, ಚಮನ್ ಸಾಬ್, ಗಿರೀಶ್, ರಮೇಶ್, ಸೈಯದ್, ಗಣೇಶ, ಗಣಪ ಮುಂತಾದವರು ಪಾಲ್ಗೊಂಡಿದ್ದರು.

error: Content is protected !!