ಹರಪನಹಳ್ಳಿ, ನ.11- ಪಟ್ಟಣದ ಪುರಸಭೆ ಅಧ್ಯಕ್ಷರಾಗಿ 20ನೇ ವಾರ್ಡಿನ ಫಾತೀಮಾಬೀ ಹಾಗೂ ಉಪಾಧ್ಯಕ್ಷರಾಗಿ 21ನೇ ವಾರ್ಡಿನ ಎಚ್.ಕೊಟ್ರೇಶ್ ಆಯ್ಕೆ ಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಗಿರೀಶಬಾಬು ತಿಳಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಫಾತೀಮಾಬೀ ಎಂ., 19ನೇ ವಾರ್ಡಿನ ಸುಮಾ ವಾಗೀಶ್ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ 21ನೇ ವಾರ್ಡಿನ ಕಾಂಗ್ರೆಸ್ ಪಕ್ಷದ ಎಚ್.ಕೊಟ್ರೇಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. 19 ಮತಗಳನ್ನು ಪಡೆದ ಫಾತೀಮಾಬೀ, ನಾಲ್ಕು ಮತಗಳ ಅಂತರದಿಂದ ಸುಮಾ ವಾಗೀಶ್ ಅವರನ್ನು ಪರಾಭವಗೊಳಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಎಚ್.ಕೊಟ್ರೇಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡರು.
ಈ ವೇಳೆ ಸಂಸದೆ ಡಾ. ಪ್ರಭಾ ಮಲ್ಲಿ ಕಾರ್ಜುನ್ ಮಾತನಾಡಿ, ಪುರಸಭೆಯನ್ನು ನಗರಸಭೆಯನ್ನಾಗಿ ಮಾಡಲು ಉಸ್ತುವಾರಿ ಸಚಿವರಲ್ಲಿ ಚರ್ಚಿಸುತ್ತೇನೆ. ಪಕ್ಷೇತರರು ಇಬ್ಬರು ಹಾಗೂ ಒಬ್ಬ ಜೆಡಿಎಸ್ ಸದಸ್ಯರು ಸೇರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಬೆಂಬಲ ವ್ಯಕ್ತಪಡಿಸಿದ್ದೀರಿ. ಅಭಿವೃದ್ದಿ ವಿಚಾರದಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಿ ಎಂದರು.
ಹರಪನಹಳ್ಳಿಯಲ್ಲಿ ಕೇಂದ್ರೀಯ ವಿದ್ಯಾಲಯ ಹಾಗೂ ಕೇಂದ್ರದ ಅನುದಾನಗಳನ್ನು ತರಲು ಶ್ರಮಿಸುತ್ತೇನೆ. ತಾಲ್ಲೂಕಿನ ಉಚ್ಚಂಗಿ ದುರ್ಗದ ಸಮಗ್ರ ಅಭಿವೃದ್ದಿಗೆ ಹಾಗೂ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಲು ಶ್ರಮಿಸುತ್ತೇವೆ ಎಂದರು.
ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಮಾತನಾಡಿ, ಪುರಸಭೆಯ ಅಭಿವೃದ್ದಿಗೆ ನಾವೂ ಸಹಕಾರ ನೀಡುತ್ತೇವೆ. ಎಪ್ಪತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳು ಆಗಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಮಾತನಾಡಿ ಚರಂಡಿ, ಒಳಚರಂಡಿಗಾಗಿ ಪುರಸಭೆಗೆ ವಿಶೇಷ ಅನುದಾನ ನೀಡಬೇಕು ಎಂದು ಸಂಸದರಲ್ಲಿ ಮತ್ತು ಶಾಸಕರಲ್ಲಿ ಮನವಿ ಮಾಡಿದರು.
ಪುರಸಭೆ ಸದಸ್ಯ ಡಿ.ಅಬ್ದುಲ್ ರಹಿಮಾನ್ ಸಾಬ್ ಮಾತನಾಡಿದರು. ಪುರಸಭೆ ಸದಸ್ಯರಾದ ಗೊಂಗಡಿ ನಾಗರಾಜ ಜೋಗಿನ, ಭರತೇಶ್, ಟಿ.ವೆಂಕಟೇಶ್, ಲಾಟಿ ದಾದಾಪೀರ್, ಗಣೇಶ್, ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್ ಸೇರಿದಂತೆ ಇತರರು ಇದ್ದರು.