ದೀಪಾವಳಿ ಲಕ್ಷ್ಮೀ ಪೂಜೆಯಂದು ವರ್ತಕರು ಅಂಗಡಿಗಳ ಹೊರಗೆ ದೀಪಾಲಂಕಾರವನ್ನು ವಿಶೇಷವಾಗಿ ಮಾಡುವುದು ರೂಢಿ.
ಸುಮಾರು ಆರು ದಶಕಗಳ ಹಿಂದೆ ಚೌಕಿಪೇಟೆಯಲ್ಲಿ ಬಹುಷಃ ಖ್ಯಾತ ಜವಳಿ ವರ್ತಕ ಡಿ.ದುಗ್ಗಪ್ಪ ಬಸವರಾಜಪ್ಪ ಅಂಗಡಿಗೋ (ಶಾಮನೂರು ಶಿವಪ್ಪನವರ ಅಂಗಡಿಯ ಎದುರು) ಅಥವಾ ಅದರ ಆಸುಪಾಸಿನ ಅಂಗಡಿಗೋ ವಿಶೇಷ ದೀಪಾಲಂಕಾರದಲ್ಲಿ ಬೈನೇಮರದ `ಗೊನೆ’ಯನ್ನು ಸಹ ಬಳಸಿದ್ದರು. ನಾನು ಅದೇ ಮೊದಲ ಬಾರಿ ಈ ಅಲಂಕಾರವನ್ನು ನೋಡಿದ್ದು. `ಬೈನೆ’ ಅಥವಾ `ಬಗಿನೆ’ ಎಂಬ ಈ ಮರವು `ತಾಳೆ’ ಅಂದರೆ `ಪಾಮ್’ ಜಾತಿಗೆ ಸೇರಿದ್ದು, ವೈಜ್ಞಾನಿಕವಾಗಿ ಇದನ್ನು `ಕ್ಯಾರಿಯೋಟ್ ಉರೆನ್ಸ್’ ಎಂದು ಕರೆಯಲಾಗುತ್ತದೆ.
ಹೆಚ್ಚು ಮಳೆ ಬೀಳುವ ಮಲೆನಾಡು ಪ್ರದೇಶದಲ್ಲಿ ಸಾಮಾನ್ಯವಾಗಿ ಬೆಳೆಯುವ ಇದು ತೆಂಗಿನ ಮರಕ್ಕಿಂತ ಎತ್ತರವಾಗಿ ಸುಮಾರು 100 ಅಡಿಗಳಷ್ಟು ಬೆಳೆಯುತ್ತದೆ. ಇದರ ಎಳೆಯ ಕಾಂಡವನ್ನು ಸೀಳಿ ಹಗ್ಗದಂತೆ ಬಳಸುವುದು, ಬೆಳೆದ ಕಾಂಡವನ್ನು ನೇಗಿಲು ನೊಗ ಮಾಡಲು, ಮನೆಯ ಕಂಬ ಪಕಾಸಿಗಾಗಿ, ಬಲಿತ ಕಾಂಡವನ್ನು ಸೀಳಿ ದಬ್ಬೆಯಾಗಿ ಮಾಡಿ ಬಳಸುವುದು, ಗರಿಯನ್ನು ಚಪ್ಪರ ತೋರಣ ಮುಂತಾದ ಅಲಂಕಾರಕ್ಕೆ ಅಲ್ಲದೇ ಪೊರಕೆಯಾಗಿ, ಬೈನೆ ಕಾಯಿಯನ್ನು ಮೀನು ಹಿಡಿಯಲು ಬಳಸುವುದು ಹೀಗೆ ಇದು ಬಹು ಉಪಯೋಗಿ.
ಬೈನೆ ಮರದಿಂದ ಇಳಿಸಿದ `ನೀರಾ’ ಆಯುರ್ವೇದಿಯವಾಗಿ ತುಂಬಾ ಒಳ್ಳೆಯದು. ಇದು ಹುಳಿಯಾದಾಗ `ಸೇಂದಿ’ಯಾಗಿಯೂ ಪ್ರಸಿದ್ಧಿ. ಇಂತಹ ಬೈನೆ ಮರದ ಗೊನೆಯು ನೂರಾರು ಬಿಳಲುಗಳ ಗುಚ್ಛವಾಗಿ ಹತ್ತಾರು ಅಡಿಗಳಷ್ಟು ಉದ್ದವಿರುತ್ತದೆ.
ಅಂದು ಈ ಬೈನೆ ಗೊನೆಗಳನ್ನು ಅಂಗಡಿಯ ಆಚೀಚೆ ನೇತುಬಿಟ್ಟು ಅದರ ಒಳಗೆ ಟ್ಯೂಬ್ ಲೈಟ್ ಅನ್ನು ಜೋಡಿಸಿದ್ದು, ತುಂಬಾ ಆಕರ್ಷಕವಾಗಿ ಕಾಣಿಸುತ್ತಿತ್ತು.
ಹಳೆ ಊರಲ್ಲಿನ ಹಳೆಯ ಕಾಲದ ದೀಪಾವಳಿ ಸ್ವಾರಸ್ಯಗಳು…
ನಮ್ಮ ಬಾಲ್ಯದಲ್ಲಿನ ದೀಪಾವಳಿಯ ಕೆಲವು ಸ್ವಾರಸ್ಯಗಳು ಹಾಗೂ ನೆನಪುಗಳು
ದೀಪಾವಳಿಯ ಮಾರನೆಯ ದಿನ ಸಂಜೆ ಮಕ್ಕಳು ಬೀದಿಯಲ್ಲಿ ಬಚ್ಚಿಟ್ಟುಕೊಳ್ಳುವ ಆಟ `ಐಸ್ ಪೈಸ್’ ಆಡುತ್ತಿದ್ದರು. ಚೌಕಿಪೇಟೆ ಹಾಗೂ ಚಿಗಟೇರಿ ಗಲ್ಲಿ ತಿರುವಿನ ಮೂಲೆಯ ವಸಂತ್ ಕುಮಾರ್ ಬೂರ್ ಮಲ್ ಗಾಂಧಿಯವರ ಮನೆಯ ಬಳಿ ಹುಡುಗನೊಬ್ಬ ಗೋಡೆಗೆ ಮುಖ ಹಚ್ಚಿ ಕಣ್ಣು ಮುಚ್ಚಿಕೊಂಡು `ಹತ್ತು ಇಪ್ಪತ್ತು ಮೂವತ್ತು ನಲವತ್ತು ಐವತ್ತು’ ಎಂದು ಎಣಿಸುವಾಗ ಉಳಿದ ಹುಡುಗರು ಓಡಿಹೋಗಿ ಗುಂಡಾಲ್ ಪರಶುರಾಮ ಶೆಟ್ರ ಅಂಗಡಿ ಬಾಗಿಲ ಹಿಂದೆ, ಹುಂಡೆಕಾರ್ ಕುಂಬಿ ವೀರಭದ್ರಪ್ಪನವರ ಮನೆ ಬಾಗಿಲ ಹಿಂದೆ, ಕಲ್ಕತ್ತಾ ಡಾಕ್ಟರ್ ಶಾಪಿನ ಬಾಗಿಲ ಹಿಂದೆ ಹೀಗೆಲ್ಲಾ ಅಡಗಿಕೊಳ್ಳುವುದು, ಕಣ್ಣು ಮುಚ್ಚಿ ಎಣಿಸಿದವ ಅವರನ್ನು ಹುಡುಕುವುದು ಹೀಗೆ ಬಹಳ ಹೊತ್ತು ಆಟ ಸಾಗಿ ಮುಕ್ತಾಯವಾಯಿತು. ಮಕ್ಕಳೆಲ್ಲಾ ಮನೆಗೆ ಹೋದರು. ಒಬ್ಬ ಪುಟ್ಟ ಹುಡುಗ ಮಾತ್ರ ನಾಪತ್ತೆಯಾಗಿದ್ದ.
ಪೋಷಕರು ಕಂಗಾಲಾಗಿ ಬೀದಿಯ ಅಂಗಡಿ ಮನೆಗಳಲ್ಲೆಲ್ಲಾ ಹುಡುಕಿದರು. ಬೀದಿಯ ಕೆಲವರು ಸೈಕಲ್ ತೆಗೆದುಕೊಂಡು ಅಕ್ಕಪಕ್ಕದ ಬೀದಿಗಳನ್ನೆಲ್ಲಾ ಜಾಲಾಡಿ ಬಂದರು. ಹುಡುಗ ಮಾತ್ರ ಪತ್ತೆಯಾಗಲಿಲ್ಲ. ತಾಯಿ ಅಳಲಾರಂಭಿಸಿದರು, ತಂದೆ ಕುಸಿದುಕೂತರು. ಆಗೆಲ್ಲಾ ಮಕ್ಕಳು ಕಳೆದರೆ `ಹಲಗೆ’ ಹೊಡೆಯುವವರಿಗೆ ಹೇಳಿ ಮಗುವಿನ ಚಹರೆ, ವಯಸ್ಸು, ಉಡುಗೆ ಮತ್ತು ನಾಪತ್ತೆಯಾದ ಸ್ಥಳ ಹೇಳಿ ಹುಡುಕಿಕೊಟ್ಟವರಿಗೆ ಬಹುಮಾನ ಎಂದು `ಟಾಮ್ ಟಾಮ್’ ಸಾರುವುದು ರೂಢಿ. ಇನ್ನೇನು ಟಾಮ್ ಟಾಮ್ ಗಾರನನ್ನು ಕರೆಸಬೇಕು ಎನ್ನುವಷ್ಟರಲ್ಲಿ ದುಗ್ಗಪ್ಪರ ಅಂಗಡಿಯ ಈಶಪ್ಪರಿಗೋ ಅಥವಾ ಟೈಲರ್ಗೋ ಹಿಂದಿನ ದಿನ ದೀಪಾವಳಿ ಅಲಂಕಾರಕ್ಕಾಗಿ ಇಳಿಬಿಟ್ಟಿದ್ದ ಬೈನೆ ಗೊನೆ ತುಸು ಅಲುಗಾಡಿದಂತೆ ಕಾಣಿಸಿತು!. ಹೋಗಿ ಅದನ್ನು ಸರಿಸಿ ನೋಡಿದಾಗ ಹುಡುಗ ಅಲ್ಲಿ ಇದ್ದ. ಬಚ್ಚಿಟ್ಟುಕೊಳ್ಳುವ ಆಟದಲ್ಲಿ ಆ ಗೊನೆಯ ಒಳಗೆ ಹೋಗಿ ಅಡಗಿ ಕುಳಿತ ಹುಡುಗ ಹಾಗೆಯೇ ನಿದ್ರೆಗೆ ಜಾರಿದ್ದ. ಹುಡುಗ ತೂಕಡಿಸುತ್ತಾ ಬಿದ್ದಾಗ ಗೊನೆ ಅಲುಗಾಡಿತ್ತು. ಮಗುವನ್ನು ಕಂಡ ತಂದೆ ಹುಡುಕಿಕೊಟ್ಟ ಟೈಲರನ್ನು ತಬ್ಬಿಕೊಂಡರೆ ತಾಯಿಯಂತೂ ಆನಂದದಿಂದ ಕಣ್ಣೀರಿಡುತ್ತಾ ಆ ಟೈಲರಿನ ಕಾಲಿಗೇ ಬಿದ್ದರು.
– ಹೆಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ