`ಸುಬ್ರಾಯ ಶೆಟ್ಟರ ಸೆಟಲೈಟ್? !!’

`ಸುಬ್ರಾಯ ಶೆಟ್ಟರ ಸೆಟಲೈಟ್? !!’

1969ನೇ ಇಸವಿಯ ದೀಪಾವಳಿ, ಚೌಕಿಪೇಟೆಯ ಮಕ್ಕಳು ಪಟಾಕಿಯ ಬಗ್ಗೆ ಮಾತನಾಡುತ್ತಿದ್ದರು. ರಾಕೆಟ್ ನ ವಿಷಯ ಬಂತು. `ಅಮೆರಿಕದ ರಾಕೆಟ್ಟು ಚಂದ್ರನ ಮ್ಯಾಗೆ ಇಳೀತಂತೆ!’ ಅಂತ ಒಬ್ಬ ಹುಡುಗ ಹೇಳಿದ. ಸುಬ್ರಾಯ ಶೆಟ್ಟರ ಹಾಸಿಗೆ ಅಂಗಡಿಯ ಕಟ್ಟೆ ಮೇಲೆ ಕುಳಿತಿದ್ದ ಗುರುಲಿಂಗಪ್ಪ (ಶಿಕ್ಷಕಿ ಶಿವಲೀಲಾರ ಸಹೋದರ) `ಅದು ರಾಕೆಟ್ ಅಲ್ಲ ಸೆಟಲೈಟ್’ ಅಂತ ತಿದ್ದಿ ಹೇಳಿದರು.

1969ರ ಜುಲೈ 20ನೇ ತಾರೀಕು ಅಮೆರಿಕದ ಅಪೋಲೋ 11 ಉಪಗ್ರಹ ಮೂಲಕ ಚಂದ್ರನ ಮೇಲೆ ಗಗನಯಾತ್ರಿಗಳಾದ ನೀಲ್ ಆರ್ಮ್ ಸ್ಟ್ರಾಂಗ್, ಎಡ್‌ವಿನ್ಆಲ್ ಡ್ರಿನ್ ಪಾದಾರ್ಪಣೆ ಮಾಡಿದ್ದರು. ಮೈಕೆಲ್ ಕಾಲಿನ್ಸ್ ಚಾಲಕರಾಗಿ ನೌಕೆಯನ್ನು ನಿಯಂತ್ರಿಸಿ ದ್ದರು. ರಾಕೆಟ್ ಮೂಲಕ ಆಕಾಶಕ್ಕೆ ಉಪಗ್ರಹದ ಉಡಾವಣೆ ಬಗ್ಗೆಯೂ ಗುರುಲಿಂಗಪ್ಪ ಮಕ್ಕಳಿಗೆ ವಿವರಿಸಿದರು. ಅಲ್ಲೇ ಇದ್ದ ಸುಬ್ರಾಯ ಶೆಟ್ಟರು `ರಾಕೆಟ್ ಯಾಕ್ ಬೇಕು? ನಾವ್ ಹಂಗೇ ಆಕಾಶಕ್ಕೆ ಕಳಿಸ್ತೀವಿ’ ಎಂದರು. ಅದು ಹೆಂಗೆ ಶೆಟ್ರೇ?’ ಎಂದು ಮಕ್ಕಳು ಆಶ್ಚರ್ಯದಿಂದ ಕೇಳಿದಾಗ `ನಾವು ಸಾಗರದಾಗಿದ್ದಾಗ ಅಂತದೆಲ್ಲ ಮಾಡೀವಿ’ ಎಂದರು ಶೆಟ್ಟರು. ಅದೇ ವೇಳೆಗೆ ಅಲ್ಲಿಗೆ ಬಂದ ಎದುರು ಮನೆಯ ಜಯರಾಮ್ ರಾಯ್ಕರ್ (ಪ್ರಸಿದ್ಧ ನ್ಯಾಯವಾದಿ ಏಕನಾಥ ರಾಯ್ಕರ್ ರವರ ಹಿರಿ ಸಹೋದರರು) ರವರು `ನಮ್ಮ ಅಂಕೋಲಾ-ಕಾರವಾರದ ಕಡೆಗೂ ದೀಪಾ ವಳಿಯಾಗೆ ಅಂತವು ಮಾಡಿ ಆಕಾಶಕ್ಕೆ ಬಿಟ್ಟೇವಿ’ ಎಂದರು. `ಇಲ್ಲೂ ಯಾಕೆ ಮಾಡಬಾರದು’ ಎಂದರು ಗುರುಲಿಂಗಪ್ಪ. `ಹೌದು ಶೆಟ್ಟ್ರೇ ಮಾಡ್ರಿ ಮಾಡ್ರಿ’ ಎಂದರು ಮಕ್ಕಳು.

ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದ ಪಟ್ಟೇದ ಗಂಗಾಧರಪ್ಪ (ಜಯದೇವ ಪ್ರೆಸ್ ಕಣ್ಮಕುಪ್ಪೆ ಗುರುಪಾದಪ್ಪನವರ ಅಳಿಯಂದಿರು) `ಅದುಕ್ ಬೇಕಾದ ಸಾಮಾನ್ ನಾನ್ ತರಿಸಿ ಕೊಡ್ತೀನಿ’ ಅಂದರು. ವಸ್ತುಗಳು ಬಂದವು. ಶೆಟ್ಟರ ಅಂಗಡಿ ಮುಂದೆ `ಆಕಾಶ ವಾಹನ’ದ ತಯಾರಿ ಪ್ರಾರಂಭವಾಗಿಯೇ ಬಿಟ್ಟಿತು!. 

ಶೆಟ್ಟರು ಬಿದಿರನ್ನು ಸೀಳಿ ಗೂಡಾಗಿ ಮಾಡಿ ದರು. ಗಟ್ಟಿಯಾದ ಪಾರದರ್ಶಕ ಹಾಳೆಯನ್ನು ಸುತ್ತಲೂ ಅಂಟಿಸಿದರು. ಜಯರಾಮ್ ರಾಯ್ಕರ್ ಗೂಡಿನ ಮೇಲ್ಭಾಗದಲ್ಲಿ ದಪ್ಪ ಕಾಗದ ದಿಂದ ಪ್ರೊಫೆಲರ್ ತರದ `ಗಿರಿಗಿಟ್ಲಿ’ಯನ್ನು ನಾಜೂಕಾಗಿ ಮಾಡಿ ಕೂರಿಸಿದರು!. ಮಧ್ಯದಿಂದ ಒಂದು ತಂತಿ ಇಳಿಬಿಟ್ಟು ಅದಕ್ಕೆ ಹಣತೆ ದೀಪ ವನ್ನು ನೇತು ಬಿಡುವ ವ್ಯವಸ್ಥೆಯೂ ಆಯಿತು. ಇದಕ್ಕೆಲ್ಲಾ ಶೆಟ್ಟರ ಎದುರು ಮನೆಯ ಅಣ್ಣಿಗೇರಿ ಶಿವಬಸಪ್ಪ ಮುಂತಾದವರು ಕೈ ಜೋಡಿಸಿದರು.

ಹಣತೆಗೆ ಎಣ್ಣೆ ಹಾಕಿ ದೀಪ ಹೊತ್ತಿಸುತ್ತಲೇ ಗೂಡೊಳಗಿನ ಗಾಳಿ ಬಿಸಿಯಾಗಿ ಮೇಲ್ಭಾಗದ ಗಿರಿಗಿಟ್ಲಿ ಪ್ರೊಫೆಲರಿನಂತೆ ನಿಧಾನವಾಗಿ ತಿರುಗಲಾರಂಭಿಸಿತು!!. ಇದರಿಂದಾಗಿ ಬಹುಷಃ ಗಾಳಿಯ ಕೆಳಮುಖ ಒತ್ತಡ ನಿವಾರಣೆಯಾಯಿತು. ಗಾಳಿಯ ಮೇಲ್ಮುಖ ಒತ್ತಡದಿಂದಾಗಿ ಇರಬಹುದು ಗೂಡು ದೀಪದ ಸಹಿತವಾಗಿ ನಿಧಾನವಾಗಿ ಮೇಲೇರುತ್ತಾ  ಸ್ವಲ್ಪ ದೂರ ಹೋಯಿತು!!.

ಮಕ್ಕಳಿಗಷ್ಟೇ ಅಲ್ಲ, ಆ ಹೊತ್ತಿಗೆ ಅಲ್ಲಿ ಬಂದು ಸೇರಿದ್ದ ದೊಡ್ಡವರು ಸಹಾ ಆಶ್ಚರ್ಯ ಹಾಗೂ ಖುಷಿಯಿಂದ ಉದ್ಘಾರ ತೆಗೆದು ಚಪ್ಪಾಳೆ ತಟ್ಟಿದರು. `ಚಂದ್ರನ್ ಮ್ಯಾಗೆ ಹೋಗಾದ್ ಬಿಟ್ಟು ಇಲ್ಲೇ ಇಳಿತಲ್ಲಾ ಶೆಟ್ರೇ??’ ಎಂದು ಬಾಲಕ ಈರಣ್ಣ ಕೇಳಿದ. `ಈಗ ಗಾಳಿ ಸರಿ ಇಲ್ಲ, ನಡರಾತ್ರಿ ಮತ್ತೆ ಬಿಡ್ತೀನಿ, ಬರಾ ಹುಣ್ಣಿಮಿ ರಾತ್ರಿ ದುರ್ಬಿನ್ ನಾಗೆ ನೋಡ್ರಲೇ ಚಂದ್ರನ್ ಮ್ಯಾಗ್ ಇಳಿದಿದ್ದು  ಕಾಣಿಸ್ತೇತಿ’ ಎಂದರು ತಮಾಷೆಯಾಗಿ ಶೆಟ್ಟರು.

ಇದಾಗಿ 15 ದಿನಗಳ ನಂತರ ಕಾರ್ತಿಕ ಶುದ್ಧ ಹುಣ್ಣಿಮೆ ರಾತ್ರಿ ಈರಣ್ಣ, ರುದ್ರೇಶಿ ಹಾಗೂ ಕೆಲ ಹುಡುಗರು ನನ್ನ ಬಳಿ ಬಂದು `ಸ್ವಾಮಣ್ಣ (ನನ್ನನ್ನು ಸ್ವಾಮಿ ಎಂದೇ ಕರೆಯುತ್ತಿದ್ದರು) `ನಿಮ್ಮತ್ರ ದುರ್ಬಿನ್ ಐತಾ?’ ಎಂದು ಕೇಳಿದರು. `ಯಾಕೆ?’ ಎಂದೆ. `ಅವತ್ತು ದೀಪಾವಳೀಲಿ ಶೆಟ್ರು ಬಿಟ್ಟ ಸ್ಯಾಟಿಲೈಟು ಚಂದ್ರನ ಮ್ಯಾಗೆ ಇಳದೇತಾ ನೋಡಕ್ಕೆ’ ಎಂದರು.  ನಾನು ನಗುತ್ತಾ ಹೇಳಿದೆ `ನನ್ನತ್ರ ದುರ್ಬೀನು ಇಲ್ಲ, ಇದ್ರೂ ಅದರಿಂದ ಕಾಣಿಸಲ್ಲ, ಅಮೆರಿಕದ ಉಪಗ್ರಹ ನಿಯಂತ್ರಣ ಕೇಂದ್ರದಲ್ಲಿ ಭಾರೀ ಟೆಲಿಸ್ಕೋಪ್ ಅಂತ ಇರುತ್ತೆ, ಅದರಲ್ಲಿ ನೋಡಿದ್ರೆ ಕಾಣಿಸುತ್ತೆ’ ಎಂದೆ. ಮಕ್ಕಳು ನಿರಾಶರಾಗಬಾರದೆಂದು ಸುಳ್ಳು ಹೇಳಿದೆ. `ಹೌದಾ!’ ಎಂದು ಮಕ್ಕಳು ಹೋದರು.

  ಹೆಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ

error: Content is protected !!