ದಾವಣಗೆರೆ, ಸೆ. 30- ಕರ್ನಾಟಕ ನಿವೃತ್ತ ನೌಕರರ ವೇದಿಕೆ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಂದು ನಾಳೆ ದಿನಾಂಕ 1 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ನಿವೃತ್ತ ನೌಕರರಿಂದ ಕಪ್ಪು ಪಟ್ಟಿ ಧರಿಸಿ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ರಾಜ್ಯ ಮಹಾಪ್ರಧಾನ ಸಂಚಾಲಕ ಎಂ.ಪಿ.ಎಂ. ಷಣ್ಮುಖಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಾದ್ಯಂತ ಏಕಕಾಲಕ್ಕೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ನಾಳೆ ದಿನಾಂಕ 1 ರಂದು ಬೆಳಿಗ್ಗೆ 10.30 ರಿಂದ ಸಂಜೆ 6 ರವರೆಗೆ ಸಾಂಕೇತಿಕವಾಗಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ಹೇಳಿದರು.
2022 ಜುಲೈ 1 ರಿಂದ 2024 ಜುಲೈ 31 ರ ಅವಧಿಯಲ್ಲಿ ನಿವೃತ್ತರಾದ ನೌಕರರಾಗಿದ್ದು, ನಮಗೆ 6ನೇ ವೇತನ ಆಯೋಗದ ಲೆಕ್ಕಾಚಾರದ ಅನುಸಾರ ಡಿಸಿಆರ್‌ಜಿ ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣಗಳ ನಿವೃತ್ತಿ ಆರ್ಥಿಕ ಸೌಲಭ್ಯವನ್ನು ನೀಡಬೇಕೆಂದು ಆಗ್ರಹಿಸಿ ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು, ಎಲ್ಲಾ ಕ್ಷೇತ್ರಗಳ ಶಾಸಕರು, ಎಲ್ಲಾ ಜಿಲ್ಲಾಧಿಕಾರಿಗಳ ಹಾಗೂ ಎಲ್ಲಾ ತಹಶೀಲ್ದಾರ್‌ಗಳ ಮುಖಾಂತರ ನೂರಾರು ನಿವೃತ್ತ ನೌಕರರು ಮನವಿಯನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಇದೇ ತಿಂಗಳು 18 ರಂದು ರಾಜ್ಯದ 12 ಸಾವಿರ ನಿವೃತ್ತ ನೌಕರರ ರಾಜ್ಯಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶವನ್ನು ವಿಶ್ರಾಂತ ನ್ಯಾಯಮೂರ್ತಿ ಸಂತೋಷ್ ಹೆಗಡೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ, ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ರಾಜ್ಯಾ ಧ್ಯಕ್ಷ ಡಾ. ಎಲ್. ಭೈರಪ್ಪ ಅವರುಗಳ ಸಮ್ಮುಖದಲ್ಲಿ ನಮಗೆ ಆಗಿರುವ ಅನ್ಯಾಯದ ಕುರಿತು ರಾಜ್ಯದ ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ ನೀಡಲಾಗಿದ್ದರೂ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಕೆ.ಹೆಚ್. ಮಂಜುನಾಥ್ ರೆಡ್ಡಿ, ಕೆ. ಶಿವಶಂಕರ್, ಡಿ. ಆನಂದಪ್ಪ, ಜಿಲ್ಲಾ ಸಂಚಾಲಕರಾದ ಎಂ.ವಿ. ಹೊರಕೇರಿ, ಎ.ಕೆ. ಭೂಮೇಶ್, ಎಸ್.ಎನ್. ಗಂಗಪ್ಪಳವರ್, ಹೆಚ್. ಗುರಪ್ಪ, ಅರ್ಜುನಪ್ಪ, ಡಿ. ತಿಪ್ಪೇಸ್ವಾಮಿ, ಜಿ.ಎಸ್. ನಾಗರಾಜ್ ಉಪಸ್ಥಿತರಿದ್ದರು.