ಆರ್ಥಿಕ ಶಕ್ತಿಯಾಗುವ ಭರದಲ್ಲಿ ಪಾರಂಪರಿಕ ಮೌಲ್ಯ ಮರೆಯಬಾರದು

ಆರ್ಥಿಕ ಶಕ್ತಿಯಾಗುವ ಭರದಲ್ಲಿ ಪಾರಂಪರಿಕ ಮೌಲ್ಯ ಮರೆಯಬಾರದು

ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘದ ಪ್ರತಿಭಾ ಪುರಸ್ಕಾರದಲ್ಲಿ ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ

ದಾವಣಗೆರೆ, ಸೆ.30- ವಿಶ್ವಮಟ್ಟದ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿರುವ ಭಾರತ ಇದರ ಭರದಲ್ಲಿ ಪಾರಂಪರಿಕ ಮೌಲ್ಯಗಳನ್ನು ಅಲಕ್ಷಿಸಬಾರದು. ಶಾಲಾ – ಕಾಲೇಜು ಶಿಕ್ಷಕರು ಪಠ್ಯೇತರವಾಗಿ ನಮ್ಮ ದೇಶದ ಪಾರಂಪರಿಕ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಹೇಳಬೇಕು ಎಂದು ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ ಕರೆ ನೀಡಿದರು.

ಅವರಿಂದು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ವತಿ ಯಿಂದ ಏರ್ಪಾಡಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಪ್ರಾಚಾರ್ಯರುಗಳಿಗೆ ಅಧಿಕಾರಿಗಳಿಗೆ ಸನ್ಮಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. 

ರಾಜ್ಯದ 2084 ಪದವಿ ಪೂರ್ವ ಕಾಲೇಜುಗಳಿಂದ 6,90,000 ವಿದ್ಯಾರ್ಥಿಗಳು ಕಳೆದ ಸಾಲಿನಲ್ಲಿ ಪಿಯು ಪರೀಕ್ಷೆ ತೆಗೆದುಕೊಂಡಿದ್ದು, 5,52,000 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ದೇಶದ 1,163 ವಿಶ್ವ ವಿದ್ಯಾನಿಲಯಗಳ 56769 ಕಾಲೇಜುಗಳಿಂದ ಸುಮಾರು ನಾಲ್ಕೂವರೆ ಕೋಟಿ ಪದವೀಧರರು ಪ್ರತಿ ವರ್ಷ ಹೊರ ಬರುತ್ತಿದ್ದು, ಎಲ್ಲರೂ ನೌಕರಿಯನ್ನೇ ಅರಸದೇ ಸ್ವ-ಉದ್ಯೋಗಿಗಳಾದಲ್ಲಿ ದೇಶದ ಆರ್ಥಿಕತೆ ಐದು ಟ್ರಿಲಿಯನ್ ಡಾಲರ್ ತಲುಪಲು ಕಷ್ಟವಾಗುವುದಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ವಿಧಾನದ ಶಿಕ್ಷಣವು ಅಗತ್ಯ ಎಂದರು.  

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಗನೂರು ಬಸಪ್ಪ ಎಜುಕೇಷನ್ ಟ್ರಸ್ಟಿನ ಕಾರ್ಯದರ್ಶಿ ಸಂಗಮೇಶ್ವರ ಗೌಡರು, ಅನುಕೂಲ ಸ್ಥಿತಿಯಲ್ಲಿರುವ ಶಿಕ್ಷಕರುಗಳು ಬಡ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ತೆಗೆದುಕೊಂಡು ಓದಿಸಿದಲ್ಲಿ ಅದು ಸಮಾಜಕ್ಕೆ ದೊಡ್ಡ ದೇಣಿಗೆಯಾಗುತ್ತದೆ ಎಂದರು. 

ಮುಖ್ಯ ಅತಿಥಿಯಾಗಿ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಜಿ.ಕರಿಸಿದ್ದಪ್ಪ, ಪದವಿ ಪೂರ್ವ ಕಾಲೇಜುಗಳ ನಿವೃತ್ತ ಪ್ರಾಚಾರ್ಯರು ಗಳು ವೃತ್ತಿಯಿಂದ ನಿವೃತ್ತರಾದರೂ  ಪ್ರವೃತ್ತಿಯಿಂದ ನಿವೃತ್ತರಾಗದೇ ಆತ್ಮ ಸಂತೋಷಕ್ಕಾಗಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಮಾಡಬೇಕು ಎಂದು ಕರೆ ಕೊಟ್ಟರು.

ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಸಿ.ಬಿ.ರವಿ ಮಾತನಾಡಿ, ಶಿಕ್ಷಕರು ಜ್ಞಾನ ದಾನದಲ್ಲಿ ಜಿಪುಣ ರಾಗಬಾರದು. ತಮ್ಮೆಲ್ಲ ಜ್ಞಾನವನ್ನೂ  ನಿತ್ಯವೂ ವಿದ್ಯಾರ್ಥಿಗಳಿಗೆ ನೀಡುತ್ತಿರಬೇಕು. ವಿದ್ಯಾರ್ಥಿಗಳು ಸತ್ಪ್ರಜೆಗಳಾಗಿ ಭ್ರಷ್ಟಾಚಾರ ರಹಿತ ಮೌಲ್ಯಾಧಾರಿತ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್, ಸರ್ಕಾರಿ ಅಷ್ಟೇ ಅಲ್ಲದೇ ಅನುದಾನಿತ ಮತ್ತು ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನೂ ಸಹಾ ತಮ್ಮ ಸಂಘದ ವತಿಯಿಂದ ಸನ್ಮಾನಿಸಲಾಗುತ್ತಿದೆ ಎಂದರು.

ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನೆರವೇರಿದ ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕರಾದ ಉಷಾ ಪ್ರಸನ್ನ ಮಾಡಿದರು.

ಸ್ವಾಗತವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಿ.ಎಸ್.ಮಲ್ಲಿಕಾರ್ಜುನ ಕೋರಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶರಣಪ್ಪ ಎನ್.ಗೋವಿನ ಗಿಡದ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. 

ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರವನ್ನು ಜಿ.ವಿ.ಭೀಮಕುಮಾರ, ಆರ್. ದೇವೀರಪ್ಪ ನಿರ್ವಹಿಸಿದರೆ, ನಿವೃತ್ತ ಪ್ರಾಚಾರ್ಯರುಗಳಿಗೆ ಸನ್ಮಾನವನ್ನು ಕೆ.ಎ.ಮಂಜುಳಾ, ಟಿ.ಡಿ.ಸುಜಾತ ಹಾಗೂ ಬಿ.ಆರ್. ಮಂಜುಳಾ ನಿರ್ವಹಿಸಿದರು. 

ಮಾಗನೂರು ಬಸಪ್ಪ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಸಾದ್ ಬಂಗೇರ,  ಸಂಘದ ರಾಜ್ಯ ಪ್ರತಿನಿಧಿ ಆರ್.ನಂದೀಶ್, ಸಂಘಟನಾ ಕಾರ್ಯದರ್ಶಿ ಹೆಚ್.ಎಸ್.ರಂಗಪ್ಪ, ಹೆಚ್.ವಿ. ಶ್ರೀನಿವಾಸ, ಹೆಚ್.ಚಂದ್ರಪ್ಪ, ಎನ್.ಶಿವಪ್ಪ, ಸಿ.ಪಿ.ಜಗದೀಶ್, ಆರ್.ದೇವಿರಪ್ಪ, ಎ.ಟಿ.ರಂಗಪ್ಪ ಮತ್ತಿತರರು ಉಪಸ್ಥಿತರಿದ್ದರು. 

ಸಂಘದ ಖಜಾಂಚಿ ಕಾರಿಗನೂರು ಕತ್ತಲಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶಿವಾನಂದ ಆರ್.ಕುಡಪಲಿ ವಂದಿಸಿದರು.

error: Content is protected !!