ದಾವಣಗೆರೆ, ಸೆ. 30 – ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್ಗಳ ಸಂಯುಕ್ತಾಶ್ರಯದಲ್ಲಿ ಬರುವ ಅ.1 ಹಾಗೂ 2ರಂದು ಕೃಷಿ ವಿಜ್ಞಾನ ಕೇಂದ್ರದಲ್ಲಿ ‘ಸಸ್ಯ ಸಂತೆ ಮತ್ತು ಸಾವಯವ ಪರಿಕರಗಳ ಮಾರಾಟ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಟಿ.ಎನ್. ದೇವರಾಜ, ಈ ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗುವುದು. 50 ಕ್ಕೂ ಹೆಚ್ಚು ಹಣ್ಣಿನ ಗಿಡಗಳ ಮಾರಾಟ, ದೇಸಿ ಬೀಜಗಳ ಪ್ರದರ್ಶನ ಮತ್ತು ಮಾರಾಟ, ಕೈತೋಟ ಮತ್ತು ತಾರಸಿ ತೋಟಗಳಿಗೆ ಬೇಕಾಗುವ ಸಲಕರಣೆಗಳು, ಸಾವಯವ ಪರಿಕರ ಗೊಬ್ಬರಗಳ ಮಾರಾಟ, ಸಿರಿಧಾನ್ಯಗಳ ಉಪ ಉತ್ಪನ್ನಗಳು, ಸಾವಯವ ಆಹಾರ ಪದಾರ್ಥಗಳ ಮಾರಾಟ ಹೀಗೆ ಹಲವಾರು ವಿಶೇಷತೆಗಳಿವೆ ಎಂದರು.
ಅ.1ರ ಮಧ್ಯಾಹ್ನ 2 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಸ್ಯ ಸಂತೆಗೆ ಚಾಲನೆ ನೀಡಲಿದ್ದಾರೆ.
ಬೆಂಗಳೂರಿನ ಐಸಿಎಆರ್-ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ವಿ. ವೆಂಕಟಸುಬ್ರಮಣ್ಯಂ ಸಾವಯವ ಪರಿಕರಗಳ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ದಾವಣಗೆರೆ ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್ ‘ಅಡಿಕೆ ಬೆಳೆಯಲ್ಲಿ ಅಂತರ ಬೆಳೆಗಳು ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಸಾವಯವ ಪದ್ಧತಿ ಅಳವಡಿಕೆ’ ಕುರಿತ ಕಾರ್ಯಗಾರ ಉದ್ಘಾಟಿಸಲಿದ್ದಾರೆ. ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಕೆ.ಪಿ. ಬಸವರಾಜಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ದೇವರಾಜ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಎಂ.ಜಿ. ಬಸವನಗೌಡ, ಸುಪ್ರಿಯ ಪಿ. ಪಾಟೀಲ್ ಉಪಸ್ಥಿತರಿದ್ದರು.