ರಾಣೇಬೆನ್ನೂರು,ಸೆ.4- ರೈತರ ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸಿ, ಆಧಾರ್ ಲಿಂಕ್ ಮಾಡುವ ಸರ್ಕಾರದ ಯೋಜನೆ ವಿರೋಧಿಸಿ, ರೈತ ಮುಖಂಡ ರವೀಂದ್ರಗೌಡ ಪಾಟೀಲರ ನೇತೃತ್ವದಲ್ಲಿ ಇಲ್ಲಿನ ಹೆಸ್ಕಾಂ ಕಚೇರಿ ಮುಂದೆ ಕೃಷಿ ಪಂಪ್ಸೆಟ್ಗಳ ಪರಿಕರಗಳನ್ನು ಬಿಸಾಕಿ ವಿನೂತನ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಹನುಮಂತಪ್ಪ ಅವರು, ಸರ್ಕಾರ ಈ ಕೂಡಲೇ ಈ ರೈತ ವಿರೋಧಿ ನೀತಿ ಕೈಬಿಟ್ಟು ಈ ಹಿಂದಿನ ಅಕ್ರಮ-ಸಕ್ರಮ ಯೋಜನೆ ಜಾರಿಗೊಳಿಸಬೇಕೆಂದರು.
ನೇತೃತ್ವ ವಹಿಸಿದ್ದ ರವೀಂದ್ರಗೌಡ ಪಾಟೀಲ ಮಾತನಾಡಿ, ಈಗಾಗಲೇ ಕೃಷಿ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟಿನಿಂದ 10 ಲಕ್ಷ ರೈತರು ಕೃಷಿ ಚಟುವಟಿಕೆಯಿಂದ ಹೊರಕ್ಕೆ ಹೋಗಿದ್ದಾರೆ. ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಜಾರಿಗೆ ತಂದಿದ್ದ 10 ಹೆಚ್.ಪಿ. ಒಳಗಿನ ರೈತರ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಯೋಜನೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಅವರು, ರೈತರಿಗೆ ಅನುಕೂಲವಾಗುವ ಅಂತಹ ಯೋಜನೆಗಳನ್ನು ಜಾರಿಗೆ ತರಬೇಕು. ಕೃಷಿ ಚಟುವಟಿಕೆಗಳಿಗೆ ನಿರಂತರ ತ್ರಿಪೇಸ್ ವಿದ್ಯುತ್ ಪೂರೈಸಬೇಕು. ಹೊಸದಾಗಿ ಕೃಷಿ ಪಂಪ್ಸೆಟ್ಗಳಿಗೆ ಪರ್ಮಿಶನ್ ಕೊಡುವಾಗ ಕಂಬ ಮತ್ತು ಇತರೆ ಸಲಕರಣೆಗಳಿಗೆ ಯಾವುದೇ ವಿದ್ಯುತ್ ಶುಲ್ಕ ಭರಿಸಬಾರದೆಂದರು.
ಈ ಸಂದರ್ಭದಲ್ಲಿ ಹಿರಿಯ ರೈತ ಮುಖಂಡರಾದ ನಾಗಪ್ಪ ರಮಾಳದ, ಹರಿಹರಗೌಡ ಎಸ್. ಪಾಟೀಲ, ಸುರೇಶ ಬಿ., ಬಸವರಾಜ ಯಲ್ಲಕ್ಕನವರ, ಹಾಲೇಶ ಕೆಂಚನಾಯ್ಕರ, ಶಿದ್ದಪ್ಪ ಯಡಚಿ, ಯಲ್ಲಪ್ಪ ಓಲೇಕಾರ, ಮಲಕಪ್ಪ ಲಿಂಗದಹಳ್ಳಿ, ಹಾಲೇಶ ತಳವಾರ, ಸುರೇಶ ಮಲ್ಲಾಪುರ, ಬಸವರಾಜ ಸಣ್ಣ ಹನುಮನಗೌಡ್ರ, ನಾಗನಗೌಡ ಪಾಟೀಲ, ಬಸಪ್ಪ ಹರಿಜನ ಮುಂತಾದವರು ಪಾಲ್ಗೊಂಡಿದ್ದರು. ಶಹರ ಪೊಲೀಸ್ಠಾಣೆ ಪಿ.ಎಸ್.ಐ. ಗಡ್ಡೆಪ್ಪ ಗುಂಜಟಗಿ ಅವರು ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.