ಮಲೇಬೆನ್ನೂರು, ಸೆ. 4- ನೊಳಂಬ ವೀರಶೈವ ಸಮಾಜ ಹಾಗೂ ಹರಿಹರ ತಾಲ್ಲೂಕಿನ ಧೀಮಂತ ಜನನಾಯಕ, ಹರಿಹರ ತಾಲ್ಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ, ಕಾಂಗ್ರೆಸ್ ಮುಖಂಡರೂ ಆಗಿದ್ದ ನಂದಿಗುಡಿ ನಂದೀಶ್ವರ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಗೋವಿನಹಾಳ್ ಡಿ.ಹೆಚ್. ನಿಂಗನಗೌಡ ಅವರ 50ನೇ ವರ್ಷದ ಪುಣ್ಯ ಸಂಸ್ಮರಣೆ ಅಂಗವಾಗಿ ಕೆ.ಎನ್. ಹಳ್ಳಿ ಗ್ರಾಮದಲ್ಲಿರುವ ನಿಂಗನಗೌಡರ ಪ್ರತಿಮೆಗೆ ನಿನ್ನೆ ಸಮಾಜದವರು ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವಕೀಲ ನಂದಿತಾವರೆ ತಿಮ್ಮನಗೌಡ ಅವರು, ನಿಂಗನಗೌಡರು ಹರಿಹರ ತಾಲ್ಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದಾಗ ದೆಹಲಿಯಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಹಮ್ಮಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಕುರಿತಾದ ವಿಶೇಷ ಸಭೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ನಿಂಗನಗೌಡರು ಮಂಡಿಸಿದ ವಿಷಯಕ್ಕೆ ಇಂದಿರಾಗಾಂಧಿ ಅವರು 25 ಸಾವಿರ ರೂ. ಬಹುಮಾನ ನೀಡಿದ್ದರು.
ಆ ಬಹುಮಾನದ ಹಣದಲ್ಲಿ ನಿಂಗನಗೌಡರು ತಾಲ್ಲೂಕು ಅಭಿವೃದ್ಧಿ ಮಂಡಳಿಯ ಕಛೇರಿ ಯನ್ನು ಅಭಿವೃದ್ಧಿ ಪಡಿಸಿದ್ದರೆಂದು ಹಿರಿಯರು ಹೇಳುತ್ತಾರೆ.
ಗಾಂಜಿವೀರಪ್ಪ ಮತ್ತು ಸಿದ್ದವೀರಪ್ಪನವರ ಒಡನಾಡಿಯಾಗಿದ್ದ ನಿಂಗನಗೌಡರು, ಹರಿಹರ ತಾಲ್ಲೂಕಿನ ಜನಪ್ರಿಯ ಜನನಾಯಕರಾಗಿ ಎಲ್ಲಾ ವರ್ಗಗಳ ಜನರ ಪ್ರೀತಿಗೆ ಪಾತ್ರರಾಗಿದ್ದರೆಂದು ನಮ್ಮ ಹಿರಿಯರು ನಮಗೆ ಹೇಳುತ್ತಿದ್ದರೆಂದು ನಂದಿತಾವರೆ ತಿಮ್ಮನಗೌಡ ತಿಳಿಸಿದರು.
ಗ್ರಾಮದ ಮುಖಂಡರಾದ ಕೆ.ಹೆಚ್. ನಾಗನಗೌಡ, ಬಣಕಾರ ಪರಮೇಶ್ವರಪ್ಪ, ಕೆ.ಟಿ. ಶಿವಾನಂದಪ್ಪ, ಜಿ. ಬೇವಿನಹಳ್ಳಿ ಹುಲ್ಲತ್ತಿ ತಿಮ್ಮನಗೌಡ, ಹಳ್ಳಿಹಾಳ್ ಹೆಚ್. ಈರನಗೌಡ, ವಾಸನದ ಗಂಟೇರ ನಂದಿಗೌಡ, ಜಿಗಳಿಯ ಎನ್.ಎಂ.ಪಾಟೀಲ, ಮಲೇಬೆನ್ನೂರಿನ ಎ. ಆರೀಫ್ ಅಲಿ ಮತ್ತಿತರರು ಈ ವೇಳೆ ಭಾಗವಹಿಸಿದ್ದರು.