ದವನ್ ಮತ್ತು ನೂತನ ಕಾಲೇಜಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಡಾ.ಜಯಂತ್ ಕಿವಿಮಾತು
ದಾವಣಗೆರೆ, ಆ. 13- ಮನುಷ್ಯನ ವ್ಯಕ್ತಿತ್ವ ವಿಕಸನ ಶಿಕ್ಷಣ ಪಡೆಯುವುದರಿಂದ ಮಾತ್ರ ಸಾಧ್ಯ ಹಾಗೂ ಪ್ರತಿಯೊಬ್ಬರ ಅಭಿವೃದ್ಧಿಗೆ ವಿದ್ಯೆಯು ಸಹಕಾರಿಯಾಗಲಿದೆ. ಸಾಮಾನ್ಯರಾಗಿದ್ದು ಶಿಕ್ಷಣ ಪಡೆದವರು ಅತ್ಯುನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಇದಕ್ಕೆ ಸ್ಪಷ್ಟ ನಿದರ್ಶನಗಳು ಎಂದು ಸಿದ್ದಗಂಗಾ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಜಯಂತ್ ಡಿ.ಎಸ್. ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಮೊನ್ನೆ ಏರ್ಪಾಡಾಗಿದ್ದ ದವನ್ ಹಾಗೂ ನೂತನ ಪದವಿ ಪೂರ್ವ ಕಾಲೇಜಿನ `ಶೈಕ್ಷಣಿಕ ವರ್ಷಾರಂಭ ಮತ್ತು ಪ್ರತಿಭಾ ಪುರಸ್ಕಾರ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಮನುಷ್ಯನಿಗೂ ಶಿಕ್ಷಣ ಅಗತ್ಯ. ಅದರಿಂದಲೇ ನಮ್ಮ ಸಾಧನೆಯ ಹಾದಿ ಸುಗಮವಾಗುವುದು. ಆರಂಭಿಕವಾಗಿ ಅವಕಾಶ ವಂಚಿತರೆಂದು ಕುಗ್ಗಬೇಡಿ – ಛಲ, ವಿಶ್ವಾಸ ಹಾಗೂ ಸತತ ಪರಿಶ್ರಮದಿಂದ ಯಶಸ್ಸಿನೆಡೆಗೆ ಮುನ್ನಡೆಯಿರಿ ಎಂದು ಕಿವಿಮಾತು ಹೇಳಿದರು.
ದವನ್ ಹಾಗೂ ನೂತನ ವಿದ್ಯಾ ಸಂಸ್ಥೆಯಿಂದ ಪ್ರತಿಭಾ ಪುರಸ್ಕಾರ ಪಡೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಮಹೋನ್ನತಿ ಸಾಧಿಸಿ ತಂದೆ-ತಾಯಿ, ಗುರುಗಳಿಗೆ ಕೀರ್ತಿ ತರಬೇಕು ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ದವನ್ ಕಾಲೇಜಿನ ಜಂಟಿ ಕಾರ್ಯದರ್ಶಿ ಡಾ. ಜಿ.ಎಸ್. ಅಂಜು, ನಮ್ಮ ಸಂಸ್ಥೆ ಪ್ರತಿ ವಿದ್ಯಾರ್ಥಿಗಳ ಸಾಧನೆಯನ್ನು ನಿರೀಕ್ಷಿಸುತ್ತದೆ. ಜೊತೆಗೆ ಬೆಂಬಲಿಸುತ್ತದೆ. ನಿಮ್ಮ ಯಶಸ್ಸಿನ ಪಾಲುದಾರರಾದ ನಿಮ್ಮ ತಂದೆ ತಾಯಿಗಳಿಗೆ, ಗುರುಗಳಿಗೆ ನಿಮ್ಮ ಸಾಧನೆಯೇ ಬಹುದೊಡ್ಡ ಕೊಡುಗೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದವನ್ ಕಾಲೇಜಿನ ಕಾರ್ಯದರ್ಶಿ ಹಾಗೂ ನೂತನ ವಿದ್ಯಾ ಸಂಸ್ಥೆಯ ರಿಜಿಸ್ಟ್ರಾರ್ ವೀರೇಶ್ ಪಟೇಲ್ ಮಾತನಾಡಿ, ನಾವು ನಮ್ಮ ಸಂಸ್ಥೆ ಕೊಡ ಮಾಡುವ ವಿದ್ಯಾರ್ಥಿ ವೇತನ, ನಿಮ್ಮ ಸಾಧನೆಯ ಪ್ರೋತ್ಸಾಹ ಬೆಂಬಲವಾಗಿದೆ. ಪ್ರತಿ ವರ್ಷವೂ ವಿದ್ಯಾರ್ಥಿಗಳು ಒಳ್ಳೆಯ ಅಂಕಗಳನ್ನು ಪಡೆದು ವಿದ್ಯಾರ್ಥಿ ವೇತನ ಪಡೆಯುವವರ ಸಂಖ್ಯೆ ದ್ವಿಗುಣವಾಗಲಿ, ನಿಮ್ಮ ಭವಿಷ್ಯದ ಶೈಕ್ಷಣಿಕ ಬದುಕು ಯಶಸ್ಸಿನ ಪಯಣವಾಗಲಿ ಹಾಗೂ ಇತರೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ ಎಂದು ಹಾರೈಸಿದರು. ಸಮಾರಂಭದಲ್ಲಿ ಕಳೆದ ಶೈಕ್ಷಣಿಕ ಸಾಲಿನ ಪಿಯುಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ. 85, 90, 95 ಫಲಿತಾಂಶ ಪಡೆದ 114 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ದವನ್ ಕಾಲೇಜಿನ ನಿರ್ದೇಶಕ ಹರ್ಷರಾಜ್ ಎ. ಗುಜ್ಜರ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟು,
ವಿಜ್ಞಾನ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಮನುಶ್ರೀ ಪಾಟೀಲ್, ಉಮೈರಾ ಖಾನಂ, ರಂಜಿತಾ ಆರ್. ಹಾಗೂ ವಾಣಿಜ್ಯ ವಿಭಾಗದಲ್ಲಿ ಖುಷ್ಬು ರಜಪೂತ್, ಐಶ್ವರ್ಯ ಗೊಲ್ಲರ್, ಸಾಕ್ಷಿ ಪಿ ಜೈನ್, ಪ್ರೀತಿ ಹೆಚ್.ಟಿ. ಇವರನ್ನು ಗೌರವಿಸಿದರು.
ವಿದ್ಯಾರ್ಥಿಗಳು ವಿಷಯವಾರು ನೂರಕ್ಕೆ ನೂರು ಅಂಕಗಳನ್ನು ಗಳಿಸಲು ಸಹಕರಿಸಿದ ಉಪನ್ಯಾಸಕರಾದ ಶ್ರೀಮತಿ ಅಶ್ವಿನಿ ಹೆಚ್.ಸಿ., ನಿತಿನ್ ಕುಮಾರ್, ರೋಷನ್ ಜಮೀರ್, ಶ್ರೀಮತಿ ತೃಪ್ತಿ ಜನ್ನು, ಶ್ರೀಮತಿ ಶಾಯಿಸ್ತ ಅಂಜುಮ್ ಹಾಗೂ ಇತರೆ ಸಿಬ್ಬಂದಿ ವರ್ಗದವರನ್ನು ಗೌರವಿಸಲಾಯಿತು.
ವಿದ್ಯಾರ್ಥಿನಿಯರಾದ ಎಂ.ಎಂ. ಭವಿಷ್ಯ, ಎಂ.ಸಂಜನಾ ಪ್ರಾರ್ಥನಾ ನೃತ್ಯ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ನೂತನ ವಿದ್ಯಾಸಂಸ್ಥೆಯ ಖಜಾಂಚಿ ಶ್ರೀಮತಿ ಎಂ.ಇ. ವಾಣಿ, ನೂತನ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಕೆ.ಟಿ. ಸುಮಿತ್ರಾ ಉಪಸ್ಥಿತರಿದ್ದರು.