ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯಕ್ರಮದಲ್ಲಿ ಪಂಪ ಪ್ರಶಸ್ತಿ ಪುರಸ್ಕೃತ ನಾಡಿನ ಹಿರಿಯ ಲೇಖಕ ಡಾ. ಬಾಬು ಕೃಷ್ಣಮೂರ್ತಿ
ದಾವಣಗೆರೆ, ಆ. 13- ಲಕ್ಷಾಂತರ ಮಂದಿಯ ತ್ಯಾಗ, ಬಲಿದಾನಗಳಿಂದ ಸಿಕ್ಕಿರುವ ಭಾರತದ ಸ್ವಾತಂತ್ರ್ಯವನ್ನು ದುರುಳರಿಂದ ರಕ್ಷಿಸಬೇಕಾದ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ಪಂಪ ಪ್ರಶಸ್ತಿ ಪುರಸ್ಕೃತ ಹಿರಿಯ ಲೇಖಕ ಡಾ. ಬಾಬು ಕೃಷ್ಣಮೂರ್ತಿ ಹೇಳಿದರು.
ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿವೇಕ ಸಭಾಂಗಣದಲ್ಲಿ ರಾಷ್ಟ್ರೋತ್ಥಾನ ಬಳಗ ಹಾಗೂ ವರ್ತಮಾನ ವೇದಿಕೆ ಸಹಯೋಗದಲ್ಲಿ ಚಂದ್ರಶೇಖರ್ ಆಜಾದ್ ಜೀವನ ಆಧಾರಿತ ಕಾದಂಬರಿ `ಅಜೇಯ’ ದ ಸುವರ್ಣ ಸಂಭ್ರಮ, ವಾಸುದೇವ ಬಲವಂಥ ಪಡಕೆ ಜೀವನ ಆಧರಿತ ಕಾದಂಬರಿ `ಅದಮ್ಯ’ ಕ್ಕೂ ನಲವತ್ತರ ಸಂಭ್ರಮದ ನಿಮಿತ್ಯ ತಮಗೆ ಏರ್ಪಾಡಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಅಷ್ಟೇ ಅಲ್ಲದೇ ಸ್ವಾತಂತ್ರ್ಯ ನಂತರ ಕೂಡ ಭಾರತಕ್ಕೆ ಗಂಡಾಂತರ ಎದುರಾಗಿದೆ. ಮನೆ ಮುರುಕುರು, ಲಕ್ಷಾಂತರ ರಾಜಕಾರಣಿಗಳು ದೇಶವನ್ನು ಸೋಲಿಸುವ ಪ್ರಯತ್ನದಲ್ಲಿದ್ದಾರೆ. ಇಲ್ಲಿಯೇ ಹುಟ್ಟಿ ಇಲ್ಲಿಯ ಗಾಳಿ, ನೀರು, ಅನ್ನವನ್ನು ತಿಂದು ದೇಶಕ್ಕೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದ್ದಾರೆ.ಇಂತಹ ದೇಶದ್ರೋಹಿಗಳನ್ನು ಮಟ್ಟ ಹಾಕಲು ಎಲ್ಲರೂ ಜಾಗೃತರಾಗಬೇಕಿದೆ. ಸತ್ಯ ಸಂಗತಿಯ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ವೈಯಕ್ತಿಕ ಜೀವನದ ಜೊತೆಗೆ ದೇಶದ ಬಗ್ಗೆ ಚಿಂತನೆ ಮಾಡ ಬೇಕಾಗಿದೆ. ತಾಯಿ ಭಾರತಾಂ ಬೆಯ ಸೇವೆ ಮಾಡಿದಾಗ ಮಾತ್ರ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂದು ಹೇಳಿದರು.
ಅಹಿಂಸೆ, ಶಾಂತಿಯಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿರುವು ದಿಲ್ಲ. ಎರಡನೇ ಮಹಾಯುದ್ಧದಲ್ಲಿ ಭಾರೀ ಪೆಟ್ಟು ತಿಂದಿದ್ದ ಬ್ರಿಟಿಷರು, ನೇತಾಜಿ ಸುಭಾಷಚಂದ್ರ ಬೋಸರ ಆಜಾದ್ ಹಿಂದ್ ಫೌಜ್, ಮುಂಬೈ ನೌಕಾದಳದ ದಂಗೆ ಹಾಗೂ ಭಾರತೀಯರಲ್ಲಿ ಹೆಚ್ಚುತ್ತಿದ್ದ ಅಸಹನೆಯಿಂದ ದೇಶವನ್ನು ಬಿಟ್ಟು ಹೋಗಬೇಕಾಯಿತು ಎಂದರು.
ನಮ್ಮ ಪೂರ್ವಜರು ತಮ್ಮ ರಕ್ತ ತರ್ಪಣದಿಂದ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ. ದೇಶ ಗಂಡಾಂತರ ಎರುರಿಸುತ್ತಿರುವ ಇಂತಹ ಸಂದರ್ಭದಲ್ಲಿ ಸ್ವಾತಂತ್ರ್ಯವನ್ನು ಮುಂದಿನ ಪೀಳಿಗೆಗೆ ಉಳಿಸಿ ಹೋಗುವುದು ದೊಡ್ಡ ಸವಾಲಾಗಿದೆ ಎಂದು ಹೇಳಿದರು.
ರಾಷ್ಟ್ರೋತ್ಥಾನ ಸಾಹಿತ್ಯ ಸಂಪಾದಕ ವಿಘ್ಞೇಶ್ವರ ಭಟ್ ಮಾತನಾಡಿ, ಡಾ. ಬಾಬು ಕೃಷ್ಣಮೂರ್ತಿ ಅವರ `ಅಜೇಯ ಮತ್ತು ಅದಮ್ಯ’ ಈ ಎರಡೂ ಕೃತಿಗಳು ಚಂದ್ರಶೇಖರ್ ಆಜಾದ್ ಮತ್ತು ವಾಸುದೇವ ಬಲವಂತ ಪಡಕೆ ಅವರ ಜೀವನ ಗಾಥೆಯನ್ನು ಉತ್ತಮವಾಗಿ ಚಿತ್ರಿಸಲಾಗಿದೆ ಎಂದರು.
ಕ್ರಾಂತಿಕಾರಿಗಳ ಕುರಿತು ಇನ್ನೂ ಅನೇಕ ಕೃತಿಗಳು, ಲೇಖನಗಳನ್ನೂ ಸಹ ಬರೆದಿದ್ದಾರೆ. ಎಲ್ಲಾ ಕೃತಿಗಳು ಸಹ ಓದಿಸಿಕೊಂಡು ಹೋಗುತ್ತವೆ. ಇವರ ಕೃತಿಗಳನ್ನು ಓದಿದ ಕೆಲವರು ತಮ್ಮ ಮಕ್ಕಳಿಗೆ ಚಂದ್ರಶೇಖರ್ ಆಜಾದ್, ಅಜೇಯ ಎಂದು ನಾಮಕರಣ ಮಾಡಿದ ಉದಾಹರಣೆಗಳಿವೆ ಎಂದು ಹೇಳಿದರು.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಹೆಚ್. ಜಯಣ್ಣ, ರಾಷ್ಟ್ರೋತ್ಥಾನ ಬಳಗದ ಟಿ.ಹೆಚ್.ಎಂ. ಜಯದೇವಯ್ಯ, ವರ್ತಮಾನ ವೇದಿಕೆ ಎಂ. ಜಿ. ಪಂಚಾ ಕ್ಷರಿ, ಶಂಭುಲಿಂಗಪ್ಪ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎಹೆಚ್. ಶಿವಯೋಗಿಸ್ವಾಮಿ, ಡಾ.ಎಸ್.ಆರ್. ಹೆಗಡೆ ಮತ್ತಿತರರು ಭಾಗವಹಿಸಿದ್ದರು. ಬಿ. ಹಾಲ ಸ್ವಾಮಿ ನಿರೂಪಿಸಿದರು. ವಿಜಯಕುಮಾರ್ ವಂದಿಸಿದರು.