ಶಿಕ್ಷಣದ ಜೊತೆಗೆ ಸಂಸ್ಕಾರ ದೊರೆತಾಗ ಮಾನವರಾಗಲು ಸಾಧ್ಯ

ಶಿಕ್ಷಣದ ಜೊತೆಗೆ ಸಂಸ್ಕಾರ ದೊರೆತಾಗ ಮಾನವರಾಗಲು ಸಾಧ್ಯ

ಅಜ್ಜಂಪುರ ಶೆಟ್ರು ಪ್ರತಿಷ್ಠಾನದ ಪ್ರತಿಭಾ ಪುರಸ್ಕಾರದಲ್ಲಿ ಜೆಎಸ್ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್. ತ್ರಿಪುರಾಂತಕ

ದಾವಣಗೆರೆ, ಆ. 11- ಶಿಕ್ಷಣದ ಜೊತೆಗೆ ಸಂಸ್ಕಾರ ದೊರೆತಾಗ ಮಾತ್ರ ನಾವು ಮಾನವರಾಗಲು ಸಾಧ್ಯ ಎಂದು ಸುತ್ತೂರು ಕ್ಷೇತ್ರದ ಜೆಎಸ್ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್. ತ್ರಿಪುರಾಂತಕ ಪ್ರತಿಪಾದಿಸಿದರು.

ಅಜ್ಜಂಪುರ ಶೆಟ್ರು ಪ್ರತಿಷ್ಠಾನದಿಂದ ನಗರದ ಮೋತಿ ಚನ್ನಬಸಮ್ಮ ವೀರಪ್ಪ ಕಲ್ಯಾಣ ಮಂಟಪದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕಳೆದ ವಾರ ಹಮ್ಮಿಕೊಂಡಿದ್ದ 19ನೇ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಡಾ. ಶಿವಕುಮಾರ ಮಹಾಸ್ವಾಮಿಗಳ ಜೀವನ ಹಾಗೂ ಜೀವನ ಮೌಲ್ಯಗಳು ಕುರಿತು ಅವರು ಮಾತನಾಡಿದರು.

ನಾವೆಲ್ಲರೂ ಮಾನವರಾಗಲು ಜನಿಸಿದ್ದೇವೆ. ಆದರೆ, ಶಿಕ್ಷಣ ಕೊಟ್ಟ ತಕ್ಷಣ ಮಾನವರಾಗುವುದಿಲ್ಲ. ಇಂದು ಶಿಕ್ಷಣ ಪಡೆದ ಅನೇಕರು ಜೈಲು ಸೇರಿದ್ದಾರೆ. ನಮ್ಮೊಳಗೆ ಮಾನವ ಧರ್ಮ ಇರಬೇಕು. ಇದು ಸಂಸ್ಕಾರದಿಂದ ಬರುತ್ತದೆ. ಯೋಗಿಗಳು ಹಾಗೂ ಮಠಾಧೀಶರು ಇದನ್ನು ಕೊಡಲಿದ್ದಾರೆ ಎಂದು ತಿಳಿಸಿದರು.

ಪ್ರಸಕ್ತ ದಿನಗಳಲ್ಲಿ ಮೂರು ವರ್ಷದವರಿದ್ದಾಗಲೇ ಮಕ್ಕಳಿಗೆ ಅಂಕ ಗಳಿಕೆಯ ಒತ್ತಡ ಹಾಕಲಾಗುತ್ತದೆ. ಮೆಡಿಕಲ್, ಇಂಜಿನಿಯರಿಂಗ್ ಪದವಿ ಪಡೆದರೂ ಬಹಳಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡುತ್ತಿದ್ದೇವೆ. ಇಂದು ಹಣ ಮಾಡುವ ಕಲೆ ಗೊತ್ತಿದೆ. ಬದುಕುವ ಕಲೆ ಗೊತ್ತಿಲ್ಲ. ದುಡ್ಡಿಗಿಂತ ಜೀವನ ಮುಖ್ಯ ಎಂದರು.

ನಡೆದಾಡುವ ದೇವರೆನಿಸಿಕೊಂಡಿದ್ದ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಶ್ರೀಗಳು ಯಾವುದೇ ಜಾತಿ, ಧರ್ಮ ಭೇದವಿಲ್ಲದೆ 10 ಸಾವಿರ ಮಕ್ಕಳಿಗೆ ತ್ರಿವಿಧ ದಾಸೋಹ ನೀಡಿದರು. ಇನ್ನು ವಿಜಯಪುರದ ಸಿದ್ದೇಶ್ವರ ಶ್ರೀಗಳ ಜ್ಞಾನ ದಾಸೋಹ ನಾಡಿಗೆ ತಿಳಿದಿದೆ. ಇಬ್ಬರ ಸೇವೆ ಅನನ್ಯ. ಉಭಯ ಶ್ರೀಗಳು ಸಮಾಜಕ್ಕಾಗಿ ಬದುಕಿದ್ದಲ್ಲದೇ, ನುಡಿದಂತೆ ನಡೆದವರಾಗಿದ್ದಾರೆ ಎಂದು ಸ್ಮರಿಸಿದರು.

ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂಬ ಕೂಗಿದೆ. ಭಾರತ ರತ್ನ ಪುರಸ್ಕಾರ ನೀಡಿದ್ದರೆ ಅದರ ಘನತೆ ಹೆಚ್ಚುತ್ತಿತ್ತು. ಶ್ರೀಗಳು ಭಾರತ ರತ್ನಕ್ಕಷ್ಟೇ ಸೀಮಿತವಲ್ಲ. ಅವರು ವಿಶ್ವರತ್ನ ಎಂದು ಬಣ್ಣಿಸಿದರು.

ನಿವೃತ್ತ ಪ್ರಾಚಾರ್ಯರಾದ ಕೆ.ಎಂ. ಗಿರಿಜಾ ವಿದ್ಯಾರ್ಥಿಗಳ ಮುಂದಿನ ಗುರಿಗಳ ಕುರಿತು ಮಾತನಾಡಿದರು. ಹಿರಿಯ ವೈದ್ಯ ಡಾ. ಎಸ್.ಎಂ. ಎಲಿ, ಅಜ್ಜಂಪುರ ಶೆಟ್ರು ಸಿದ್ದರಾಮಣ್ಣ ಅವರುಗಳು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಸವ ಬಳಗದ ಅಧ್ಯಕ್ಷ ಎ.ಹೆಚ್. ಹುಚ್ಚಪ್ಪ ಮೇಷ್ಟ್ರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಶ್ಮಿ ಶಿವಕುಮಾರ್ ಸ್ವಾಗತಿಸಿದರು.

error: Content is protected !!