`ನೀಲಿ ತೆರೆಯ ಸಾವು’ ಬಾರಿಸಿದ ಎಚ್ಚರಿಕೆಯ ಗಂಟೆ

`ನೀಲಿ ತೆರೆಯ ಸಾವು’ ಬಾರಿಸಿದ ಎಚ್ಚರಿಕೆಯ ಗಂಟೆ

ವಿಶ್ವದಾದ್ಯಂತ ಮೈಕ್ರೋಸಾಫ್ಟ್ ವ್ಯತ್ಯಯದಿಂದ ಪಾಠ ಕಲಿಯಬೇಕು ಎನ್ನುವ ಟೆಕ್ ಪರಿಣಿತರು

ನವದೆಹಲಿ, ಜು. 21 – ಶುಕ್ರವಾರದಂದು ವಿಶ್ವದಾದ್ಯಂತ ಕಂಪ್ಯೂಟರ್ ಜಾಲ ಸಮಸ್ಯೆ ಎದುರಿಸಿದ್ದು, ನಾವು ಜಾಗತಿಕವಾಗಿ ಎಷ್ಟು ಬೆಸೆದುಕೊಂಡಿದ್ದೇವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅಮೆರಿಕದ ಕಂಪನಿಯೊಂದರ ಸಾಫ್ಟ್‌ವೇರ್‌ ಅಪಡೇಟ್‌ನಲ್ಲಿ ಆದ ಲೋಪ ಜಾಗತಿಕ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯೇ ಮುಗ್ಗರಿಸುವಂತೆ ಮಾಡಿತ್ತು. ಆಧುನಿಕ ಜಗತ್ತಿನಲ್ಲಿ ಒಂದು ಸಣ್ಣ ವೈಫಲ್ಯ ಎಷ್ಟು ದೂರಗಾಮಿ ಪರಿಣಾಮ ಬೀರುತ್ತದೆ ಎಂಬುದಕ್ಕೆ ಇದು ಉದಾಹರಣೆ.

ಎತ್ತಣದ ಸಾಫ್ಟ್‌ವೇರ್ ಕಂಪನಿಯು ಮತ್ತಿಂದೆತ್ತಣದ ಕಂಪ್ಯೂಟರ್‌ನಲ್ಲಿ ಬೆಸೆದುಕೊಂಡು, ಇನ್ನೊಂದೆತ್ತಣದಲ್ಲಿರುವ ಅಮಾಯಕರಿಗೆ ಸಮಸ್ಯೆ ತರುವುದಕ್ಕೆ ಶುಕ್ರವಾರದ ಘಟನೆಯೇ ಉದಾಹರಣೆ.

ಸೈಬರ್ ಸುರಕ್ಷತಾ ಕಂಪನಿಯಾದ ಕ್ರೌಡ್‌ಸ್ಟ್ರೈಕ್ ಫಾಲ್ಕನ್‌ನ ಸ್ವಯಂ ಚಾಲಿತ ಅಪಡೇಟ್‌ನಲ್ಲಿ ಲೋಪವಾಗಿದ್ದೇ ಜಾಗತಿಕವಾಗಿ ಸಮಸ್ಯೆ ಭುಗಿಲೇಳಲು ಕಾರಣ. ಕ್ರೌಡ್‌ಸ್ಟ್ರೈಕ್‌ ತಂತ್ರಾಂಶವನ್ನು ಬೃಹತ್ ಸಂಘಟನೆಗಳೇ ಬಳಸುತ್ತವೆ. 

ಕ್ರೌಡ್‌ಸ್ಟ್ರೈಕ್‌ ತಂತ್ರಾಂಶವು ಮೈಕ್ರೋಸಾಫ್ಟ್‌ನ ವಿಂಡೋಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ವಿಂಡೋಸ್ ವಿಶ್ವದ ಅತಿ ಹೆಚ್ಚು ಬಳಕೆಯಾಗುವ ತಂತ್ರಾಂಶ. ಹೀಗಾಗಿ ಕ್ರೌಡ್‌ಸ್ಟ್ರೈಕ್ ಲೋಪ ವಿಶ್ವದಾದ್ಯಂತದ ಮೈಕ್ರೋಸಾಫ್ಟ್‌ ವ್ಯವಸ್ಥೆ ಕುಸಿಯುವಂತೆ ಮಾಡಿತ್ತು.

ಏಕಸ್ವಾಮ್ಯವೇ ಸಮಸ್ಯೆ : ವಿಂಡೋಸ್‌ ತಂತ್ರಾಂಶವು ಕಂಪ್ಯೂಟರ್‌ ವ್ಯವಸ್ಥೆಯಲ್ಲಿ ಬಹುತೇಕ ಏಕಸ್ವಾಮ್ಯದಂತೆ ಕಾರ್ಯನಿರ್ವಹಿಸುತ್ತಿದೆ. ಸಾಕಷ್ಟು ದೈತ್ಯ ಕಂಪನಿಗಳು ಕಂಪ್ಯೂಟರ್‌ ನೆಟ್‌ವರ್ಕ್ ರಕ್ಷಣೆಗಾಗಿ ಕ್ರೌಡ್‌ಸ್ಟ್ರೈಕ್ ಅನ್ನೇ ಬಳಸುತ್ತವೆ. ಒಂದೇ ರೀತಿಯ ವ್ಯವಸ್ಥೆಗಳ ಬಳಕೆ ಸಮಸ್ಯೆ ಉಲ್ಬಣಿಸಲು ಕಾರಣ ಎಂದು ಕಂಪ್ಯೂಟರ್ ಪರಿಣಿತರು ವಿಶ್ಲೇಷಿಸುತ್ತಿದ್ದಾರೆ.

ಇದರ ಜೊತೆಗೆ, ಆಧುನಿಕ ಮಾಹಿತಿ ತಂತ್ರಜ್ಞನ ವ್ಯವಸ್ಥೆಗಳು ಪರಸ್ಪರ ಬೆಸೆದುಕೊಂಡಿವೆ ಹಾಗೂ ಪರಸ್ಪರ ಅವಲಂಬಿಸಿವೆ. ಒಂದೆಡೆ ಆಗುವ ವೈಫಲ್ಯ ಇಡೀ ವ್ಯವಸ್ಥೆಯಲ್ಲಿ ಸರಣಿ ಪರಿಣಾಮಗಳಿಗೆ ಕಾರಣವಾಗುತ್ತದೆ. ಒಂದು ಸಣ್ಣ ಅಪಡೇಟ್‌ನಲ್ಲಿ ಆದ ಸಮಸ್ಯೆ ಊಹಿಸಲಾಗದ ಸವಾಲುಗಳನ್ನು ತಂದಿದೆ. 

ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳುವವರು ಪ್ರತಿಕ್ರಿಯೆ ನೀಡುವ ಮೊದಲೇ, ಜಾಗತಿಕವಾಗಿ ಸಮಸ್ಯೆ ಹರಡಿದೆ. 

ನೀಲಿ ತೆರೆಯ ಸಾವು : ಮೈಕ್ರೋಸಾಫ್ಟ್‌ನ ವಿಂಡೋಸ್ ಕಂಪ್ಯೂಟರ್‌ಗಳು ವಿಶ್ವದಾದ್ಯಂತ `ನೀಲಿ ತೆರೆಯ ಸಾವು’ ಸಂದೇಶ ನೀಡಲು ಆರಂಭಿಸಿದಾಗ, ಇದು ಮೈಕ್ರೋಸಾಫ್ಟ್ ಸಮಸ್ಯೆಯೇ ಇರಬೇಕು ಎಂದು ಶಂಕಿಸಲಾಗಿತ್ತು.

ಅಮೆರಿಕ ವಲಯದಲ್ಲಿ ತನ್ನ ಕ್ಲೌಡ್ ಸೇವೆಯಲ್ಲಿ ವ್ಯತ್ಯಯವಾಗಿದೆ ಎಂದು ಮೈಕ್ರೋಸಾಫ್ಟ್ ಸಹ ಆರಂಭದಲ್ಲಿ ಖಚಿತ ಪಡಿಸಿತ್ತು. ಮೈಕ್ರೋಸಾಫ್ಟ್‌ನ ಅಜ್ಯೂರ್ ಕ್ಲೌಡ್ ಸೇವೆ ಬಳಸುವ ಕಂಪ್ಯೂಟರ್‌ಗಳಲ್ಲೇ ಸಮಸ್ಯೆ ಕಂಡು ಬಂದಿತ್ತು.

ಅಜ್ಯೂರ್ ಸೇವೆ ಕುಸಿತದಿಂದ ಹಲವಾರು ದೇಶಗಳಲ್ಲಿನ ವಿಮಾನ, ಚಿಲ್ಲರೆ ಮಾರಾಟ, ಬ್ಯಾಂಕ್ ಹಾಗೂ ಮಾಧ್ಯಮ ಸೇವೆಗಳಲ್ಲಿ ಸಮಸ್ಯೆಯಾಯಿತು.

ನಂತರ ಅಜ್ಯೂರ್ ಸೇವೆ ಕುಸಿತವಾಗಿದ್ದಕ್ಕೆ ಕ್ರೌಡ್‌ಸ್ಟ್ರೈಕ್‌ನ ಅಪಡೇಟ್ ಕಾರಣ ಎಂಬುದು ಸ್ಪಷ್ಟವಾಯಿತು. ವಿಂಡೋಸ್‌ನಲ್ಲಿ ಫಾಲ್ಕನ್ ಅಳವಡಿಸಿಕೊಂಡ ವರ್ಚ್ಯುಯಲ್ ಯಂತ್ರಗಳಲ್ಲಿ ಯಾವುದೇ ಸಮಸ್ಯೆ ಕಂಡು ಬರಲಿಲ್ಲ.

ಟೆಕ್ ಪಾಠ : ಶುಕ್ರವಾರದ ಸರಣಿ ಸಮಸ್ಯೆಗಳಿಂದ ಟೆಕ್ ವಲಯ ಪಾಠ ಕಲಿಯಬೇಕಿದೆ. ತಮ್ಮ ಎಲ್ಲಾ ಸೇವೆಗಳಿಗೆ ಒಂದೇ ತಂತ್ರಾಂಶ ಅವಲಂಬಿಸಬಾರದು ಎಂದು ಟೆಕ್ ವಲಯದ ಪರಿಣಿತರು ಹೇಳುತ್ತಿದ್ದಾರೆ.

ಒಂದು ಸೇವೆಯಲ್ಲಿ ವ್ಯತ್ಯಯವಾದರೂ, ಇನ್ನೊಂದು ಸೇವೆಯ ಮೂಲಕ ಕಾರ್ಯ ನಿರ್ವಹಣೆ ಮಾಡಲು ಸಾಧ್ಯವಾಗುವಂತಿರಬೇ ಬೇಕು. ಬ್ಯಾಕಪ್‌ ಸರ್ವರ್‌ಗಳು, ಪರ್ಯಾಯ ಡಾಟಾ ಸೆಂಟರ್ ಹಾಗೂ ಸಮಸ್ಯೆಯಾದಾಗ ಅವಲಂಬಿಸಬಹುದಾದ ಪರ್ಯಾಯಗಳಿಗೆ ತ್ವರಿತವಾಗಿ ತೆರಳುವಂತಿರಬೇಕು ಎಂದು ಅಭಿಪ್ರಾಯ ಪಡಲಾಗುತ್ತಿದೆ.

error: Content is protected !!