ಎಚ್. ಆಂಜನೇಯ ಚಾರಿಟಬಲ್ ಟ್ರಸ್ಟ್‌ನಿಂದ ಸಮಾಜದ ಮಕ್ಕಳಿಗೆ ಶಿಕ್ಷಣಕ್ಕೆ ಒತ್ತು
ಭದ್ರಾ ಜಲಾಶಯದ ನೀರು ಸೋರಿಕೆ ಬಗ್ಗೆ ಇಂಜಿನಿಯರ್ ಬಳಿ ಮಾತನಾಡಿದ್ದೇನೆ. ಈ ಬಗ್ಗೆ ನೀರು ಸೋರಿಕೆ ಆಗದಂತೆ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ. ಇದೇ ಭಾನುವಾರ ಜನ ಪ್ರತಿನಿಧಿಯೊಂದಿಗೆ ರೈತರ ಸಭೆ ಕರೆಯಲಾಗಿದೆ.
– ಕೆ.ಎಸ್. ಬಸವಂತಪ್ಪ, ಶಾಸಕ
ದಾವಣಗೆರೆ, ಜು.18- ಎಚ್. ಆಂಜನೇಯ ಚಾರಿಟಬಲ್ ಟ್ರಸ್ಟಿನಿಂದ ಚಿತ್ರದುರ್ಗ ನಗರದ ಎಸ್.ಜಿ. ಕಲ್ಯಾಣ ಮಂಟಪದಲ್ಲಿ ಜು.20ರಂದು ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಟ್ರಸ್ಟಿನ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಮಾದಿಗ ಸಮಾಜದ ಪ್ರತಿಭಾವಂತ ಮಕ್ಕಳು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ಪುರಸ್ಕಾರ ಮಾಡಲಾಗುವುದು ಎಂದು ಹೇಳಿದರು.
ಅಂದು, ಭೂಮಿ ತಾಯಿ ಬಳಗದಿಂದ ವಾದ್ಯಗೋಷ್ಠಿ, ಮೈಸೂರು ನಗಾರಿ ಮಂಜು ತಂಡದಿಂದ ನಗಾರಿ ಕುಣಿತ ಕಾರ್ಯಕ್ರಮ ನಡೆಯಲಿವೆ ಎಂದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ಟ್ರಸ್ಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್, ಶಾಸಕರಾದ ಕೆ.ಸಿ. ವೀರೇಂದ್ರ ಪಪ್ಪಿ, ಎನ್. ವೈ. ಗೋಪಾಲಕೃಷ್ಣ, ಟಿ. ರಘುಮೂರ್ತಿ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ಆದಿ ಜಾಂಬವ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಮತ್ತು ಮುಂಡರಗಿ ನಾಗರಾಜ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಚಿತ್ರದುರ್ಗ-ದಾವಣಗೆರೆ ಜಿಲ್ಲೆಯ ಮಾದಿಗ ಸಮುದಾಯದ ಎಸ್ಸೆಸ್ಸೆಲ್ಸಿಯ 35 ಹಾಗೂ ಪಿಯುಸಿಯ 33 ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲು ತೀರ್ಮಾನಿಸಲಾಗಿದ್ದು, ಕಡುಬಡತನದ 6 ಜನರಿಗೆ ಲ್ಯಾಪ್‌ಟಾಪ್, ಉಳಿದ ವಿದ್ಯಾರ್ಥಿಗಳಿಗೆ ಬ್ಯಾಗ್ ಸೇರಿದಂತೆ ಕಲಿಕಾ ಸಾಮಗ್ರಿ ನೀಡಲಾಗುವುದು ಎಂದು ಹೇಳಿದರು.
ಶೋಷಿತ ಸಮಾಜ ಮತ್ತು ಅಕ್ಷರ ವಂಚಿತರ ಪರ ಹೋರಾಟಗಾರ ಎಚ್. ಆಂಜನೇಯ ಅವರು ಈ ಹಿಂದೆ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ಎಸ್‌ಸಿಎಸ್‌ಪಿ- ಟಿಎಸ್‌ಪಿ ಕಾಯ್ದೆ ಜಾರಿ ತರುವ ಮೂಲಕ ಸಾಕಷ್ಟು ಅನುಕೂಲ ಮಾಡಿದ್ದಾರೆ.
ಪ್ರೊ.ಸಿ.ಕೃಷ್ಣಪ್ಪ ಅವರ ಆಶಯದಂತೆ ಹಾಸ್ಟೆಲ್ ಸೌಲಭ್ಯ, ಮುರಾರ್ಜಿ ದೇಸಾಯಿ ಶಾಲೆ ನಿರ್ಮಾಣ ಇಂತಹ ವಿವಿಧ ಕಾರ್ಯಗಳ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿದ ಎಚ್. ಆಂಜನೇಯ ಅವರ ಆಶಯದಂತೆ ಟ್ರಸ್ಟ್ ಸಮಾಜಕ್ಕೆ ನೆರವು ನೀಡಲಿದೆ ಎಂದರು.
ವಕೀಲ ದುರುಗೇಶ್ ಗುಡಗೇರಿ, ಇ. ಶಿವಣ್ಣ, ಶೇಖರಪ್ಪ, ಶಿವಕುಮಾರ್ ಮತ್ತು ಇತರರು ಸುದ್ದಿಗೋಷ್ಠಿಯಲ್ಲಿದ್ದರು.