ದಾವಣಗೆರೆ, ಜು.9- ಖಾಸಗಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು, ಉಪನ್ಯಾಸಕರು ಮತ್ತು ಪ್ರಾಂಶುಪಾಲರನ್ನು ನೇಮಕಾತಿ ಮಾಡುವ ಸಮಯದಲ್ಲಿ ಸಮಗ್ರ ದಾಖಲಾತಿ ಪರಿಶೀಲಿಸುವಂತೆ ಭಾರತ ಹಿಂದೂ ಮಹಾಸಭಾ ಜಿಲ್ಲಾಧ್ಯಕ್ಷ ಜೆ. ಅರುಣ್ ಕುಮಾರ್ ಆಗ್ರಹಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಶಾಲಾ-ಕಾಲೇಜುಗಳಲ್ಲಿ ನೇಮಕಾತಿ ಸಮಯದಲ್ಲಿ ವಿದ್ಯಾರ್ಹತೆ ಹಾಗೂ ಅನುಭವ ಇಲ್ಲದವರನ್ನು ಆಡಳಿತ ಮಂಡಳಿಗಳು ನೇಮಿಸಿಕೊಳ್ಳುತ್ತಿವೆ ಎಂದು ಆರೋಪಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಅವರ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಖಾಸಗಿ ಶಾಲಾ-ಕಾಲೇಜುಗಳಿಗೆ ವಿಚಾರಣೆಯ ಭೇಟಿ ನೀಡಬೇಕು. ಜೊತೆಗೆ ದಾಖಲೆ, ಹಾಜರಿ ಪುಸ್ತಕ, ವಿದ್ಯಾರ್ಹತೆಗಳನ್ನು ಪರಿಶೀಲಿಸಿ, ಸರಿಯಾಗಿ ನಿರ್ವಹಣೆ ಮಾಡದಿರುವ ಸಂಸ್ಥೆಗಳ ಮೇಲೆ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿ ಎಜುಕೇಷನ್ ಮಾಫಿಯಾ ಹೆಚ್ಚಾಗಿದೆ. ಲಕ್ಷಗಟ್ಟಲೆ ಡೊನೇಷನ್ ಪಡೆಯಲಾಗುತ್ತಿದೆ. ಆದರೆ ತರಬೇತಿ ಪಡೆಯದೇ ಇರುವ ಶಿಕ್ಷಕರು, ಉಪನ್ಯಾಸಕರುಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಕ್ರಮಕ್ಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಸ್.ಅರುಣ್ ಕುಮಾರ್, ವಕ್ತಾರ ಕೆ.ಜಿ. ಚಂದ್ರು, ಉಪಾಧ್ಯಕ್ಷ ಪ್ರಕಾಶ್ ಎಸ್. ಅರವಿಂದಾಕ್ಷ ಉಪಸ್ಥಿತರಿದ್ದರು.