ಡೆಂಗ್ಯೂ ಮಾರಣಾಂತಿಕ ರೋಗವಲ್ಲ : ಮುಂಜಾಗ್ರತಾ ಕ್ರಮ ಅಗತ್ಯ

ಡೆಂಗ್ಯೂ ಮಾರಣಾಂತಿಕ ರೋಗವಲ್ಲ : ಮುಂಜಾಗ್ರತಾ ಕ್ರಮ ಅಗತ್ಯ

ಹೊನ್ನಾಳಿ ತಾಲ್ಲೂಕು ಪ್ರಭಾರಿ ಆರೋಗ್ಯ ವೈದ್ಯಾಧಿಕಾರಿ ಡಾ.ಎನ್.ಹೆಚ್.ಗಿರೀಶ್ ಕಳಕಳಿ

ಸಾಸ್ವೆಹಳ್ಳಿ, ಜು.9- ಡೆಂಗ್ಯೂ ಮಾರಣಾಂತಿಕ ರೋಗವಲ್ಲ. 2 ದಿನಕ್ಕಿಂತ ಹೆಚ್ಚು ಕಾಲ ಜ್ವರ ಇದ್ದರೆ ಸಾರ್ವಜನಿಕರು ನಿರ್ಲಕ್ಷ್ಯಿಸಿದೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳು ವಂತೆ ಪ್ರಭಾರಿ ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಎನ್.ಹೆಚ್.ಗಿರೀಶ್ ಮನವಿ ಮಾಡಿದರು.

ಅವರು ಡೆಂಗ್ಯೂ ಜ್ವರದ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿ ಮಾತನಾಡಿದರು. ಸರ್ಕಾರದ ಸೂಚನೆ ಮೇರೆಗೆ ಹೆಚ್ಚು ಶಂಕಿತರ ರಕ್ತ ತಪಾಸಣೆ ಮಾಡಿದ ಸಂದರ್ಭದಲ್ಲಿ ಹೆಚ್ಚಿನ ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದರು.

ಜನವರಿಯಿಂದ ಇಲ್ಲಿಯವರೆಗೆ ಶಂಕಿತರ ರಕ್ತವನ್ನು ಸಂಗ್ರಹಿಸಿ, ಜಿಲ್ಲಾ ಮಟ್ಟದ ಪ್ರಯೋಗ ಶಾಲೆಯಲ್ಲಿ ತಪಾಸಣೆಗೊಳಪಡಿಸಿದ್ದಕ್ಕೆ ಒಟ್ಟು 63 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಡೆಂಗ್ಯೂ ಜ್ವರದಿಂದ ಹನುಮನಹಳ್ಳಿಯ ಪಿಯು ವಿದ್ಯಾರ್ಥಿನಿ ಅನುಷಾ ಮೃತಪಟ್ಟಿದ್ದು ಬಿಟ್ಟರೇ, ಯಾವುದೇ ಜೀವ ಹಾನಿಯಾಗಿರುವುದಿಲ್ಲವೆಂದು ಮಾಹಿತಿ ನೀಡಿದರು.

ಆರೋಗ್ಯ ಇಲಾಖೆಯ ವತಿಯಿಂದ ಕಳೆದ ವರ್ಷ ವಿಜ್ಞಾನ ವಿಭಾಗದ ಶಿಕ್ಷಕರಿಗೆ ಮುಂಜಾಗ್ರತಾ ಕ್ರಮವಾಗಿ ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ ನೀಡಲಾಗಿದ್ದು, ಆರೋಗ್ಯ ಇಲಾಖೆಯ ವತಿಯಿಂದ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆಯರು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಡೆಂಗ್ಯೂ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದು, ಸಾರ್ವಜನಿಕರು ಅವರ ಸಲಹೆ – ಸೂಚನೆಗಳನ್ನು ಪಾಲಿಸುವಂತೆ ವಿನಂತಿಸಿದರು. 

ಜಿಲ್ಲಾ ಮಟ್ಟದ ಪ್ರಯೋಗ ಶಾಲೆಯ ಫಲಿತಾಂಶ ಬಂದಿದ್ದು, ಜುಲೈ 9ರ ಮಂಗಳವಾರದಂದು ಗೊಲ್ಲರಹಳ್ಳಿ – 1, ನರಸಗೊಂಡನಹಳ್ಳಿ – 1, ಕುಂದೂರು – 1, ಹರಳಹಳ್ಳಿ – 1, ಹತ್ತೂರು – 1, ಅರಬಗಟ್ಟೆ – 1, ಬೇಲಿಮಲ್ಲೂರು – 1, ಹೊನ್ನಾಳಿ ಪಟ್ಟಣ – 2 ಈ ದಿನ ಒಟ್ಟು 9 ಡೆಂಗ್ಯೂ ಬಂದಿರುವುದು ದೃಢಪಟ್ಟಿದೆ ಎಂದು ತಿಳಿಸಿದರು.

ಮಳೆಗಾಲ ಪ್ರಾರಂಭವಾಗುತ್ತಿದ್ದು, ಡೆಂಗ್ಯೂ, ಚಿಕನ್ ಗುನ್ಯಾ ಮತ್ತಿತರೆ ರೋಗಗಳ ಪ್ರಕರಣಗಳು ಹೆಚ್ಚುತ್ತಿದ್ದು, ಪ್ರತೀ ಗ್ರಾ.ಪಂ.ಗಳ ಅಧಿಕಾರಿಗಳು ಗ್ರಾಮದ ಜನತೆ ಯನ್ನು ರಕ್ಷಿಸುವಲ್ಲಿ ಪಂಚಾಯ್ತಿಗಳ ಸಹಕಾರ ಆರೋಗ್ಯ ಇಲಾಖೆಗೆ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ಗ್ರಾಮಗಳಲ್ಲಿ ಚರಂಡಿ ನೀರು ನಿಲ್ಲದಂತೆ ಸರಾಗವಾಗಿ ಹರಿದುಹೋಗುವಂತೆ ಚರಂಡಿಗಳನ್ನು ಸ್ವಚ್ಛ ಗೊಳಿಸಿ ಹಾಗೂ ಕೀಟನಾಶಕಗಳ ಸಿಂಪಡಣೆ ಮಾಡ ಬೇಕು. ಕುಡಿಯುವ ನೀರಿನ ಪೈಪ್‍ಲೈನ್ ಸೋರಿಕೆಯಾ ಗುತ್ತಿದ್ದರೆ, ಅವುಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಗ್ರಾಮದಲ್ಲಿನ ಅಂಗಡಿ ಮತ್ತು ಹೋಟೆಲ್‍ಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸೂಚನೆ ನೀಡಬೇಕು. 

ಕುಡಿಯುವ ನೀರಿನ ಟ್ಯಾಂಕ್‍ಗ ಳನ್ನು ಗರಿಷ್ಠ 20 ದಿನಗಳಿಗೊಮ್ಮೆ ಸ್ವಚ್ಛಗೊಳಿಸಿ, ಕ್ಲೋರಿನೇಶನ್ ಮಾಡಿಸಬೇಕು. 

ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿರಿಸಬೇಕು, ಕಸವನ್ನು ಎಲ್ಲೆಂದರಲ್ಲಿ ಬಿಸಾಕಲು ಬಿಡದೇ ಘನ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಹಾಕುವ ವ್ಯವಸ್ಥೆಯಾಗಬೇಕು ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಕಸ ಸಂಗ್ರಹಿಸುವ ವಾಹನಗಳಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ಪಡಿಸಿ, ಜನರ ಆರೋಗ್ಯ ರಕ್ಷಣೆಗೆ ಮುಂದಾಗಬೇಕೆಂದು ಅವರು ಮನವಿ ಮಾಡಿದರು.

error: Content is protected !!