ಜನಮನ ಜಾಗೃತಿಗೆ ಧರ್ಮ – ಧರ್ಮಾಚರಣೆ ಬೇಕು

ಜನಮನ ಜಾಗೃತಿಗೆ ಧರ್ಮ  – ಧರ್ಮಾಚರಣೆ ಬೇಕು

ಹರಿಹರದಲ್ಲಿನ ರಂಭಾಪುರಿ ಜಗದ್ಗುರುಗಳ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ. ಹರೀಶ್

ಹರಿಹರ, ಜು. 9 – ಅಸತ್ಯದಿಂದ ಸತ್ಯ ಸಾಕ್ಷಾತ್ಕಾರದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಸಾವಿನಿಂದ ಸಾವಿಲ್ಲದೆಡೆಗೆ ಸಾಗುವುದೇ ಜೀವನದ ಗುರಿಯಾದಾಗ ಬದುಕು ಸಾರ್ಥಕಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.  

ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ ಹಳೇಪೇಟೆ ಶ್ರೀ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಆಷಾಢ ಮಾಸದ ಅಂಗವಾಗಿ ಇಂದು ಸಂಜೆ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಮನುಷ್ಯ ತಿಳಿದಿರುವುದಕ್ಕಿಂತ ತಿಳಿಯಬೇಕಾದುದು ಬಹಳಷ್ಟಿದೆ. ಮಾನವನ ಮನಸ್ಸು, ಬುದ್ಧಿ ಮತ್ತು ಸದ್ವಿಚಾರಗಳು ಸರಿಯಾಗಿ ಬೆಳೆದಾಗ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಸಿಹಿ-ಕಹಿಗಳ ಸಂಗಮ ಮಾನವ ಜೀವನ. ನ್ಯಾಯ ನೀತಿಗಳು ನಟನೆಯಾಗಿರದೇ ನೈಜ ನಡೆಯಲ್ಲಿ ಬರಬೇಕು. ನಿರ್ಭಯದಿಂದ ಬದುಕುವುದೇ ನಿಜವಾದ ಬದುಕು. ಸತ್ಯ-ಶಾಂತಿ ಎಲ್ಲರ ಬಾಳಿಗೂ ಅಗತ್ಯ. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಕೊಟ್ಟ ತತ್ವ ಸಿದ್ಧಾಂತಗಳು ಜೀವನ ವಿಕಾಸಕ್ಕೆ ಅಡಿಪಾಯವಾಗಿವೆ. ಸ್ವಧರ್ಮ, ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆ ಅಳವಡಿಸಿಕೊಂಡು ಸಾಮರಸ್ಯ ಸೌಹಾರ್ದತೆಯ ಬದುಕು ಕಟ್ಟಿಕೊಳ್ಳಬೇಕೆಂದರು. 

ಸಮಾರಂಭವನ್ನು ಉದ್ಘಾಟಿಸಿದ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಜನಮನವನ್ನು ಜಾಗೃತಗೊಳಿಸಲು ಧರ್ಮ ಮತ್ತು ಧರ್ಮಾಚರಣೆ ಬೇಕು. ಶ್ರೀ ಗುರುವಿನ ಮಾರ್ಗದರ್ಶನ ಜೀವನದ ಉನ್ನತಿಗೆ ಅವಶ್ಯಕ. ಪ್ರಾಪಂಚಿಕ ಸಂಬಂಧಗಳು ಕಾಲಾಂತರದಲ್ಲಿ ಶಿಥಿಲಗೊಳ್ಳಬಹುದು. ಆದರೆ ಗುರು-ಶಿಷ್ಯರ ಸಂಬಂಧ ಹಾಗಲ್ಲ. ಅದು ಚಿರಂತನ ಮತ್ತು ನಿತ್ಯ ನೂತನ. ಶ್ರೀ ರಂಭಾಪುರಿ ಜಗದ್ಗುರುಗಳವರ ಮಾರ್ಗದರ್ಶನದಲ್ಲಿ ದೇವಸ್ಥಾನ ಅಭಿವೃದ್ಧಿಗೊಳ್ಳುತ್ತಿರುವುದು ಎಲ್ಲರಿಗೂ ಸಂತೋಷ ತಂದಿದೆ. ಶಾಸಕರ ಅನುದಾನದಲ್ಲಿ ಅಭಿವೃದ್ಧಿಗಾಗಿ ಸಹಕರಿಸುವುದಾಗಿ ಭರವಸೆಯಿಟ್ಟರು. 

ನೇತೃತ್ವ ವಹಿಸಿದ್ದ ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಂತರಂಗದ ಅಂಧಕಾರ ಕಳೆಯಲು ಗುರುವೊಬ್ಬನೇ ಸಮರ್ಥ. ಶಿವನ ಸಾಕ್ಷಾತ್ಕಾರ ಇನ್ನೊಂದು ರೂಪವೇ ಶ್ರೀ ಗುರು. ನಿಜವಾದ ಗುರುವಿನಿಂದ ಅರಿವು ಸಂಸ್ಕಾರ ಪಡೆದು ಜೀವನ ಸಾರ್ಥಕ ಪಡಿಸಿಕೊಳ್ಳಬೇಕೆಂದರು.

ಮುಖ್ಯ ಅತಿಥಿಗಳಾಗಿ ದೇವಸ್ಥಾನ ಸಮಿತಿ ಕಾರ್ಯದರ್ಶಿ ಕೊಂಡಜ್ಜಿ ಪಂಚಾಕ್ಷರಿ, ಕರಿಬಸಪ್ಪ ಕುಂಬಾರ, ಅಣ್ಣಪ್ಪ ಪ್ರಜಾರ, ಗಜಾಪುರ ವೀರಯ್ಯ, ಶಾಂತಕುಮಾರಿ ಇನ್ನೂ ಮೊದಲಾದ ಗಣ್ಯರು ಪಾಲ್ಗೊಂಡು, ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಪಡೆದರು. 

ಉಪನ್ಯಾಸಕ ಕೆ.ಕೆ. ವಜ್ರೇಶ್ ಸ್ವಾಗತಿಸಿದರು. ಕುಮಾರಿ ಗೌರಿಶ್ರೀ ಮೂರ್ಕಲ್ ಹಾಗೂ ಕೊಂಡಜ್ಜಿ ಶಾಂಭವಿ ಭರತ ನಾಟ್ಯ ಅಭಿನಯಿಸಿದರು. ಕಾಂತರಾಜ ಮತ್ತು ವೀರೇಶ್ ಸಂಗೀತ ಸೇವೆ ಸಲ್ಲಿಸಿದರು. ರತ್ನ ಸಾಲಿಮಠ ಹಾಗೂ ಡಾ. ಎ.ಎಮ್. ರಾಜಶೇಖರ ನಿರೂಪಿಸಿದರು.

ಸುಲಫಲ್ ದೇವರ ಮಠದ ಲಿಂ. ಶ್ರೀಮತಿ ಶಾಂತಮ್ಮ ಮತ್ತು ಪಂಚಾಕ್ಷರಯ್ಯ ಸ್ಮರಣಾರ್ಥ ಅವರ ಮಕ್ಕಳು ದಾಸೋಹ ಸೇವೆ ಸಲ್ಲಿಸಿದರು. 

error: Content is protected !!