ಈಶ್ವರಮ್ಮ ಶಾಲೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪಾಲಿಕೆಯ ಮಾಜಿ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ ಕಿವಿಮಾತು
ದಾವಣಗೆರೆ, ಜು.9- ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ನಾಯಕತ್ವದ ಗುಣ ಅಳವಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ನಾಯಕರಾಗಬೇಕೆಂದು ಪಾಲಿಕೆಯ ಮಾಜಿ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ ಕಿವಿಮಾತು ಹೇಳಿದರು.
ನಗರದ ಈಶ್ವರಮ್ಮ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಶೈಕ್ಷಣಿಕ ಶಾಲಾ ಮಂತ್ರಿ ಮಂಡಲದ ಪ್ರತಿಜ್ಞಾ ಸ್ವೀಕಾರ ಮತ್ತು ವಿದ್ಯಾರ್ಥಿ ಸಂಘದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಂಡು ಗುರುಗಳ ಮಾರ್ಗದರ್ಶನದಲ್ಲಿ ದೇಶಕ್ಕೆ ಮತ್ತು ಪಾಲಕರಿಗೆ ಕೀರ್ತಿ ತರುವಂತವರಾಗಬೇಕು ಎಂದು ಹೇಳಿದರು. ವಿರೋಧ ಪಕ್ಷವು, ಆಡಳಿತ ಪಕ್ಷದ ಕಾರ್ಯ ವೈಖರಿ ಹಾಗೂ ತಪ್ಪುಗಳನ್ನು ತಿದ್ದುವ ಬಗ್ಗೆ ಮಕ್ಕಳು ತಿಳಿದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಕೆ.ಆರ್. ಸುಜಾತ ಕೃಷ್ಣ ಮಾತನಾಡಿ, ಮಂತ್ರಿ ಮಂಡಲದ ವಿದ್ಯಾರ್ಥಿಗಳು ಉತ್ತಮ ಮೌಲ್ಯ ಅಳವಡಿಸಿಕೊಳ್ಳಬೇಕು. ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಆಡಳಿತ ಪಕ್ಷವನ್ನು ವಿರೋಧಿಸುವುದು ವಿಪಕ್ಷದ ಕೆಲಸವಾಗಿದೆ. ಆದರೆ ಶಾಲಾ ಮಂತ್ರಿ ಮಂಡಲದ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷದವರು ಒಗ್ಗಟ್ಟಿನಿಂದ ಶಾಲೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸುವ ಜತೆಗೆ ಸ್ವಾಮಿ ವಿವೇಕಾನಂದರಂತೆ ದೇಶ ಭಕ್ತರಾಗಬೇಕು ಮತ್ತು ಉತ್ತಮ ನಾಯಕತ್ವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಸ್ಥಾನಕ್ಕೆ 10ನೇ ತರಗತಿ ವಿದ್ಯಾರ್ಥಿನಿ (ಬಿ.ಎನ್. ಭಾವನಾ), ವಿಪಕ್ಷ ನಾಯಕಿಯಾಗಿ 10ನೇ ತರಗತಿ ವಿದ್ಯಾರ್ಥಿನಿ (ಎ.ಪಿ. ಯಶಸ್ವಿನಿ) ಆಯ್ಕೆಯಾಗಿದ್ದಾರೆ.
25 ಸಚಿವರನ್ನೊಳಗೊಂಡ ಶಾಲಾ ಮಂತ್ರಿ ಮಂಡಲದಲ್ಲಿ ರಾಜ್ಯಪಾಲರಾಗಿ ಪ್ರಾಚಾರ್ಯ ಕೆ.ಎಸ್. ಪ್ರಭುಕುಮಾರ್, ಸಭಾಪತಿಯಾಗಿ ಉಪಪ್ರಾಚಾರ್ಯೆ ಜಿ.ಎಸ್. ಶಶಿರೇಖಾ, ಸಂಪುಟ ಕಾರ್ಯದರ್ಶಿಯಾಗಿ ಸಹ ಶಿಕ್ಷಕಿ ರೋಹಿಣಿ ಎಂ. ಬಾವಿ ಅವರು ನಾಯಕರಾಗುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾದರು.
ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ – ಪ್ರಾಚಾರ್ಯ ಕೆ.ಎಸ್. ಪ್ರಭುಕುಮಾರ್ ಮಂತ್ರಿಮಂಡಲದ ಎಲ್ಲ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಸಹ ಶಿಕ್ಷಕಿ ಹೇಮಲತಾ ಚುನಾವಣಾ ಪ್ರಕ್ರಿಯೆ ವಿವರಿಸಿದರು. ಬಿ. ಶ್ರೀದೇವಿ ವಿದ್ಯಾರ್ಥಿ ಸಂಘ ಪರಿಚಯಿಸಿದರು.
ಈಶ್ವರಮ್ಮ ಟ್ರಸ್ಟ್ ಕಾರ್ಯದರ್ಶಿ ಜಿ.ಆರ್ ವಿಜಯಾನಂದ್, ಜಿ.ಎಸ್. ಶಶಿರೇಖಾ, ಎನ್.ಎಸ್. ಸವಿತಾ, ಎಂ. ರೋಹಿಣಿ ಇದ್ದರು.