ಬಾಪೂಜಿ ಶಾಲೆಯ ಯೋಗ ದಿನದಲ್ಲಿ ಯೋಗ ತಜ್ಞ ಶ್ರೀರಾಮಚಂದ್ರ ನಾಡಿಗ್
ದಾವಣಗೆರೆ, ಜು.7- ಪ್ರತಿನಿತ್ಯ ನಾವು ಯೋಗ ಮಾಡುವುದರಿಂದ ಇಡೀ ದಿನ ಉಲ್ಲಾಸಭರಿತ ಹಾಗೂ ಸಂತೋಷವಾಗಿರಲು ಸಹಕಾರಿಯಾಗುತ್ತದೆ ಎಂದು ಹೆಸರಾಂತ ಯೋಗ ತಜ್ಞರು ಹಾಗೂ ದಂತ ವೈದ್ಯರಾದ ಶ್ರೀರಾಮಚಂದ್ರ ನಾಡಿಗ್ ಹೇಳಿದರು.
ನಗರದ ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಚರಿಸಲಾದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾವಹಿಸಿ ಅವರು ಮಾತನಾಡಿದರು.
ಹಿಂದಿನ ಕಾಲದ ಋಷಿಮುನಿಗಳಿಂದ ಹಿಡಿದು ಇಲ್ಲಿಯವರೆಗೂ ಯೋಗವನ್ನು ಅತ್ಯಂತ ಶ್ರದ್ಧೆಯಿಂದ ರೂಡಿಸಿಕೊಂಡು ಬರಲಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಯೋಗವನ್ನು ತಮ್ಮ ಜೀವನದಲ್ಲಿ ರೂಢಿಸಿಕೊಂಡು ಆರೋಗ್ಯವನ್ನು ವೃದ್ಧಿ ಮಾಡಿಕೊಂಡು ಸುಖೀ ಜೀವನವನ್ನು ನಡೆಸಬೇಕು ಎಂದು ಅವರು ಕರೆ ನೀಡಿದರು.
ಶಾಲೆಯ ಮುಖ್ಯಸ್ಥ ಮಂಜುನಾಥ ರಂಗರಾಜು ಮಾತನಾಡುತ್ತಾ, ಪ್ರತಿಯೊಬ್ಬ ವ್ಯಕ್ತಿಯು ಅತ್ಯಂತ ಕ್ರಿಯಾಶೀಲವಾಗಿರುವುದಕ್ಕೆ ಯೋಗವೇ ಕಾರಣ ಎಂದು ತಿಳಿಸಿದರು.
ಶಾಲೆಯ ಪ್ರಾಂಶುಪಾಲರಾದ ಜೆ.ಎಸ್ ವನಿತಾ ಮಾತನಾಡಿ, ಯೋಗವು ದೇಹ, ಮನಸ್ಸು ಮತ್ತು ಆತ್ಮವನ್ನು ಸಂಯೋಜಿಸುತ್ತದೆ, ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವನ್ನು ನೀಡುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕಿ ಮಾಧುರಿ, ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಶೋಭಾರಾಣಿ, ಪ್ರಭು ಪಿ.ವಿ, ಸವಿತಾ ಆರ್., ಶೈಕ್ಷಣಿಕ ಪರಿಶೋಧಕ ವಾಸೀಮ್ ಪಾಷಾ ಎಂ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಹತ್ತನೇ ತರಗತಿ ಸುದೀಕ್ಷಾ ಆರ್.ಜಿ. ಎಂ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ವಿಶ್ವ ಸಂಗೀತ ದಿನವನ್ನು ಸಹ ಆಚರಿಸಲಾಯಿತು. ಶಾಲೆಯ ಸಾಕಷ್ಟು ವಿದ್ಯಾರ್ಥಿಗಳು ಸಂಗೀತವನ್ನು ನುಡಿಸುವ ಮೂಲಕ ಎಲ್ಲರನ್ನು ಮನರಂಜಿಸಿದರು.