ಬಿಜೆಪಿ ಅಭ್ಯರ್ಥಿ ಸೋಲಿಗೆ ಸಂಚು ರೂಪಿಸಿದವರೇ ರೇಣುಕಾಚಾರ್ಯ

ದಾವಣಗೆರೆ, ಜೂ. 21- ಲೋಕಸಭಾ ಚುನಾವಣೆ ವೇಳೆ ಜಿ.ಎಂ. ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಬಾರದೆಂದು ಟೀಂ ಮಾಡಿಕೊಂಡು ವಿರೋಧ ಮಾಡಿದ್ದೇ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಸೋಲಿಗೂ ವ್ಯವಸ್ಥಿತ ಸಂಚು ರೂಪಿಸಿದವರು ರೇಣುಕಾಚಾರ್ಯ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಆರೋಪಿಸಿದರು.

ನಗರದ ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಅವರ ನಿವಾಸದಲ್ಲಿ ಇಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ,  ನಂತರದಲ್ಲಿನ ಗೊಂದಲವನ್ನು ಜೀವಂತವಾಗಿಟ್ಟಿದ್ದೇ ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣ ಎಂದರು.

ಬಿಜೆಪಿ ಕಾರ್ಯಕರ್ತರು ಎಂದಿಗೂ ಸೋಲಿಗೆ ಅಂಜುವವರಲ್ಲ. ಚುನಾವಣಾ ಸಂಚಾಲಕರಾದ ರೇಣುಕಾಚಾರ್ಯ ಅವರು ಯಾವುದೇ ಕ್ಷೇತ್ರದಲ್ಲಿ ಚುನಾವಣೆ ಗೆಲುವಿನ ಬಗ್ಗೆ ಚರ್ಚೆ, ಸಭೆ ನಡೆಸಲಿಲ್ಲ.ಅಭ್ಯರ್ಥಿ ಸೋಲಿಗೆ ಅವರು ನಡೆದುಕೊಂಡ ರೀತಿ ಕಾರಣ ಎಂದು ದೂರಿದರು.

ನೂತನ ಸಂಸದರೇ ನಮ್ಮ ಗೆಲುವಿಗೆ ಬಿಜೆಪಿಯ ಕೆಲವರ ಸಹಕಾರ ಕಾರಣ ಎಂದಿದ್ದಾರೆ.  ಅವರು ಯಾರನ್ನು ಭೇಟಿ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ನರೇಂದ್ರ ಮೋದಿ ವಿಶ್ವ ಕಂಡ ಅಪರೂಪದ ನಾಯಕರು. ಅವರಿಗೆ ಮೋಸ ಮಾಡಿದವರು ಎಂದಿಗೂ ಉದ್ದಾರವಾಗುವುದಿಲ್ಲ. ಕುತಂತ್ರದಿಂದ ಆಗಿರುವ ಸೋಲು ಎಂದು ಹೇಳಿದರು.

ಹೊನ್ನಾಳಿ ಕ್ಷೇತ್ರಕ್ಕೆ ಮಾಜಿ ಸಚಿವ ಮಾಧುಸ್ವಾಮಿ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಬರದಂತೆ ನೋಡಿಕೊಂಡರು. ನಮ್ಮ ಅಭ್ಯರ್ಥಿ ಪ್ರಚಾರಕ್ಕೆ ತೆರಳಿದಾಗ ಅವರ ಹಿಂಬಾಲಕರ ಮೂಲಕ ಇಲ್ಲದ ಪ್ರಶ್ನೆಗಳನ್ನು ಕೇಳಿಸಿದರು. ಪಕ್ಷ ಇವರ ಸ್ವಂತ ಆಸ್ತಿಯೇ ? ಎಂದು ಪ್ರಶ್ನಿಸಿದ ವೀರೇಶ್ ಅವರು, ರೇಣುಕಾಚಾರ್ಯ ಅವರ ಹುಟ್ಟೂರು ಕುಂದೂರಿನಲ್ಲಿ ಕಾಂಗ್ರೆಸ್ 651 ಮತಗಳ ಲೀಡ್ ಪಡೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಯಶವಂತರಾವ್ ಜಾಧವ್, ಅಣಬೇರು ಜೀವನಮೂರ್ತಿ, ದೇವರಮನಿ ಶಿವಕುಮಾರ್, ಎನ್.ಎ. ಮುರುಗೇಶ್, ರಾಜನಹಳ್ಳಿ ಶಿವಕುಮಾರ್, ಬಿ.ಎಸ್. ಜಗದೀಶ್, ಯಶೋಧ ಹೆಗ್ಗಪ್ಪ, ಗಾಯತ್ರಿಬಾಯಿ ಖಂಡೋಜಿರಾವ್, ಜಿ.ಎಸ್. ಶ್ಯಾಮ್, ಸಿ. ರಮೇಶನಾಯ್ಕ, ಸುರೇಶ ಗಂಡಗಾಳೆ, ಉಪಸ್ಥಿತರಿದ್ದರು.

error: Content is protected !!