ನಗರದಲ್ಲಿ ವೀರಶೈವ ಸಮಾಜದಿಂದ ಪ್ರತಿಭಟನೆ
ದಾವಣಗೆರೆ, ಜೂ.13- ಬೆಂಗಳೂರಿನಲ್ಲಿ ನಡೆದ ರೇಣುಕಾಸ್ವಾಮಿಯ ಭೀಕರ ಹತ್ಯೆ ಖಂಡಿಸಿ ಜಿಲ್ಲಾ ವೀರಶೈವ ಸಮಾಜವು ಪಾಲಿಕೆಯ ಗಾಂಧಿ ಪುತ್ಥಳಿ ಬಳಿ ಗುರುವಾರ ಸಂಜೆ ಪ್ರತಿಭಟನೆ ನಡೆಸಿತು.
ಆರೋಪಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು ಕೊಲೆ ಆರೋಪಿ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ, ದರ್ಶನ್ ಹಾಗೂ ಆತನ ಅಭಿಮಾನಿಗಳು ಮಾಡಿರುವುದು ಅಕ್ಷಮ್ಯ ಅಪರಾಧ. ಆಪಾದಿತರನ್ನು ಪ್ರಕರಣದಿಂದ ಬಚಾವ್ ಮಾಡಲು ಕೆಲ ರಾಜಕೀಯ ಮುಖಂಡರು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.
ದರ್ಶನ್ ಹಾಗೂ ಪ್ರಕರಣದ ಇತರೆ ಆರೋಪಿಗಳನ್ನು ಅಮಾಯಕರು ಎಂದು ಬಿಂಬಿಸುವ ಯತ್ನವೂ ನಡೆದಿದ್ದು, ಯಾವ ಕಾರಣಕ್ಕೂ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಕ್ರಮ ವಹಿಸಲು ಒತ್ತಾಯಿಸಿದರು.
ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವ ಜತೆಗೆ ರೇಣುಕಾಸ್ವಾಮಿ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು. ಇಲ್ಲದಿದ್ದರೆ ಸಮಾಜದ ಬಂಧುಗಳೇ ರಾಜ್ಯಾದ್ಯಂತ ಮನೆ ಮನೆಗೆ ತೆರಳಿ ಭಿಕ್ಷೆ ಎತ್ತಿ ಮೃತರ ಕುಟುಂಬಕ್ಕೆ ಹಣ ನೀಡಲಿದ್ದೇವೆ ಎಂದ ಅವರು, ಸರ್ಕಾರವು ಕೂಡಲೇ ರೇಣುಕಾ ಸ್ವಾಮಿ ಕುಟುಂಬದ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾ ವೀರಶೈವ ಸಮಾಜದ ಮುಖಂಡರಾದ ಸಿದ್ದಲಿಂಗ ಸ್ವಾಮಿ, ತ್ಯಾವಣಗಿ ವೀರಭದ್ರ ಸ್ವಾಮಿ, ವಾಗೀಶ್ವರಯ್ಯ, ಸಿ. ಪಂಚಾಕ್ಷರಯ್ಯ, ಕೋಟಿಹಾಳ್ ಸಿದ್ದೇಶ್, ಮಲ್ಲೇಶ್ವರಪ್ಪ ಶ್ಯಾಗಲೆ, ಕಂಬಳಿ ಹಾಲಸ್ವಾಮಿ, ಚೇತನ್‌ಕುಮಾರ್, ಎಸ್.ಎಂ.ಮಂಜುನಾಥಸ್ವಾಮಿ, ಎಲ್.ಎಂ.ಆರ್.ಬಸವರಾಜಯ್ಯ, ಬಿ.ಎಂ.ರವಿ ಇತರರಿದ್ದರು.