ಮೌಢ್ಯಗಳ ನಿವಾರಣೆಗೆ ಸತೀಶ್ ಜಾರಕಿಹೊಳಿ ಜಾಗೃತಿ

ಮೌಢ್ಯಗಳ ನಿವಾರಣೆಗೆ ಸತೀಶ್ ಜಾರಕಿಹೊಳಿ ಜಾಗೃತಿ

ರಾಜನಹಳ್ಳಿ ಮಠಕ್ಕೆ ಸಂಸದೆ ಪ್ರಿಯಾಂಕ ಜಾರಕಿಹೊಳಿ ಭೇಟಿ ಕಾರ್ಯಕ್ರಮದಲ್ಲಿ ಶಾಸಕ ದೇವೇಂದ್ರಪ್ಪ ಮೆಚ್ಚುಗೆ

ಮಲೇಬೆನ್ನೂರು, ಜೂ.13- ಸತೀಶ್ ಜಾರಕಿಹೊಳಿ ಅವರು ಆಧುನಿಕ ಬಸವಣ್ಣನಾಗಿ ಸಮಾಜದಲ್ಲಿ ಬದಲಾವಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ ಎಂದು ಜಗಳೂರು ಶಾಸಕ ದೇವೇಂದ್ರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜನಹಳ್ಳಿಯ ವಾಲ್ಮೀಕಿ ಗುರುಪೀಠಕ್ಕೆ ಇಂದು ಭೇಟಿ ನೀಡಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ನೂತನ ಸಂಸದರಾದ ಪ್ರಿಯಾಂಕ ಜಾರಕಿಹೊಳಿ ಅವರು, ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದ ಸಂದರ್ಭದಲ್ಲಿ ಹಾಜರಿದ್ದು, ಅವರು ಮಾತನಾಡಿದರು.

ಸತೀಶ್ ಜಾರಕಿಹೊಳಿ ಅವರು ಮಾನವ ಬಂಧುತ್ವ ವೇದಿಕೆ ಮೂಲಕ ಸಮಾಜದಲ್ಲಿರುವ ಮೂಢನಂಬಿಕೆ, ಮೌಢ್ಯಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇದುವರೆಗೆ ಸಾವಿರಾರು ಜನ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ.

ಅಲ್ಲದೇ, ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ಉದ್ಯೋಗ ಕಲ್ಪಿಸುವ ಹಿನ್ನೆಲೆ ಯಲ್ಲಿ ವಿವಿಧ ತರಬೇತಿ ಕಾರ್ಯಾಗಾರಗಳನ್ನು ರಾಜ್ಯದ ನಾಲ್ಕು ವಿಭಾಗಗಳಲ್ಲಿ ನಡೆಸುತ್ತಿದ್ದಾರೆ. ಅಂತಹ ಧೀಮಂತ ವ್ಯಕ್ತಿಯ ಮಗಳಾದ ಪ್ರಿಯಾಂಕ ಜಾರಕಿಹೊಳಿ ಅವರು, ಸಂಸದರಾಗಿ ಆಯ್ಕೆಯಾಗಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ. ಅವರ ತಂದೆಯ ಮಾರ್ಗದರ್ಶನದಲ್ಲಿ ಪ್ರಿಯಾಂಕ ಅವರು, ಮುನ್ನಡೆಯಲ್ಲಿ ಮತ್ತು ಸಮಾಜಕ್ಕೆ ಹೊಸ ಹೊಸ ಕೊಡುಗೆಗಳನ್ನು ನೀಡಲಿ ಎಂದು ಶಾಸಕ ದೇವೇಂದ್ರಪ್ಪ ಆಶಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಈಶ್ವರ್ ಮಾತನಾಡಿ, ಸತೀಶ್ ಜಾರಕಿಹೊಳಿ ಅವರು ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗಲಿದ್ದು, ಅವರಿಗೆ ಶಕ್ತಿ ನೀಡುವ ಕೆಲಸವನ್ನು ರಾಜ್ಯದ ಶೋಷಿತ ಜನ ಮಾಡಬೇಕೆಂದು ಮನವಿ ಮಾಡಿದರು.

ಪ್ರಿಯಾಂಕ ಜಾರಕಿಹೊಳಿ ಅವರು ಉನ್ನತ ವಿದ್ಯಾಭ್ಯಾಸ ಮಾಡಿರುವುದರಿಂದ ಸಮಾಜದಲ್ಲಿ ಹೊಸ ಬದಾಲವಣೆಗೆ ಪ್ರಯತ್ನಿಸಲಿದ್ದಾರೆಂಬ ವಿಶ್ವಾಸ ನಮಗಿದೆ ಎಂದು ಈಶ್ವರ್ ಹೇಳಿದರು.

ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರು, ಪ್ರಿಯಾಂಕ ಜಾರಕಿಹೊಳಿ ಮತ್ತು ರಾಹುಲ್ ಜಾರಕಿಹೊಳಿ ಅವರನ್ನು ಸನ್ಮಾನಿಸಿ, ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.

ಕೆಪಿಸಿಸಿ ಎಸ್ಟಿ ವಿಭಾಗದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್, ಮಠದ ಧರ್ಮದರ್ಶಿಗಳಾದ ಬಿ.ವೀರಣ್ಣ, ನಲುವಾಗಲು ನಾಗರಾಜಪ್ಪ, ಕೆ.ಬಿ.ಮಂಜುನಾಥ್, ಮುಖಂಡರಾದ ಕುಕ್ಕುವಾಡ ಮಂಜಣ್ಣ, ತಿಮ್ಮೇನಹಳ್ಳಿ ಚಂದ್ರಪ್ಪ, ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯೆ ಶ್ರೀಮತಿ ಸವಿತಾ ಹುಲ್ಲುಮನೆ ಗಣೇಶ್, ಜಿ.ಪಂ. ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಹರಿಹರ ತಾ. ಗ್ರಾ. ನಾಯಕ ಸಮಾಜದ ಅಧ್ಯಕ್ಷ ಜಿಗಳಿ ರಂಗಪ್ಪ, ಕೊಕ್ಕನೂರು ಸೋಮಣ್ಣ, ಹೊನ್ನಾಳಿ ತಾ. ನಾಯಕ ಸಮಾಜದ ಅಧ್ಯಕ್ಷ ಶಿವಾನಂದಪ್ಪ, ಮಹಿಳಾ ಮುಖಂಡರಾದ ವಿಜಯಶ್ರೀ, ಪಾರ್ವತಿ, ಗೌರಮ್ಮ, ಹರಪನಹಳ್ಳಿ ಹುಚ್ಚೆಂಗೆಪ್ಪ, ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ. ಎ.ಬಿ.ರಾಮಚಂದ್ರಪ್ಪ, ದೈಹಿಕ ಶಿಕ್ಷಣಾಧಿಕಾರಿ ವಾಸನ ಮಹಾಂತೇಶ್, ಪಿಟಿಸಿಎಲ್ ಎಇಇ ಜಯ್ಯಪ್ಪ, ನಿವೃತ್ತ ಶಿಕ್ಷಕ ಜಿ.ಆರ್.ನಾಗರಾಜ್, ಕೊಂಡದಹಳ್ಳಿ ಜಯ್ಯಣ್ಣ, ಯುವ ಮುಖಂಡ ರಾಘು ದೊಡ್ಮನಿ, ಕೋಣನತಲೆ ನಾಗಪ್ಪ, ಉಕ್ಕಡಗಾತ್ರಿ ಮಂಜು, ಶ್ಯಾಗಲೆ ಮಂಜಣ್ಣ, ದೇವರಬೆಳಕೆರೆ ಮಹೇಶ್ವರಪ್ಪ, ಮಾರುತಿ ದಾಸರ್ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!