ದೇಶ ಸೇವೆಯೇ ಸಾರ್ಥಕ ಬದುಕು

ದೇಶ ಸೇವೆಯೇ ಸಾರ್ಥಕ ಬದುಕು

ಐಎಫ್‌ಎಸ್ ಅಧಿಕಾರಿ ಅವಿನಾಶ್ ವಿ.ರಾವ್ ಅಭಿಮತ

ದಾವಣಗೆರೆ, ಜೂ. 11- ದೇಶ ಸೇವೆಯೇ ಸಾರ್ಥಕ ಬದುಕು ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಯುಪಿಎಸ್‌ಸಿ ಪರೀಕ್ಷೆ ಕೇವಲ ಅತಿ ಬುದ್ಧಿವಂತರಿಗಷ್ಟೇ ಎಂಬ ಧೋರಣೆ ಸಲ್ಲದು. ಸತತ ಪರಿಶ್ರಮ, ನಿರಂತರ ಅಧ್ಯಯನ ಶೀಲತೆ, ಏಕಾಗ್ರತೆ ಇದ್ದರೆ ಯಶಸ್ಸು ಸುಲಭ ಸಾಧ್ಯ ಎಂದು ಐಎಫ್ಎಸ್ ಅಧಿಕಾರಿ (ಇಂಡಿಯನ್ ಫಾರಿನ್ ಸರ್ವಿಸ್) ಅವಿನಾಶ್ ವಿ. ರಾವ್ ಹೇಳಿದರು.

ನಗರದ ವನಿತಾ ಸಮಾಜ ಸಭಾಂಗಣದಲ್ಲಿ ವನಿತಾ ಸಮಾಜ, ಇನ್‌ಸೈಟ್ಸ್ ಐಎಎಸ್ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ `ಸ್ಫೂರ್ತಿ’ ಸ್ಪರ್ಧಾತ್ಮಕ ಪರೀಕ್ಷಾಂಕ್ಷಿಗಳ ಪ್ರೇರಣಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ವನಿತಾ ಡಿಜಿಟಲ್ ಲೈಬ್ರರಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದೆ ಯುಪಿಎಸ್‌ಸಿ ಪರೀಕ್ಷಾ ತರಬೇತಿಗಾಗಿ ದೆಹಲಿ, ಬೆಂಗಳೂರಿಗೇ ಹೋಗಬೇಕಾದ ಅನಿವಾರ್ಯತೆ ಇತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ನಾವಿದ್ದಲ್ಲಿಯೇ ಆನ್‌ಲೈನ್ ಕೋಚಿಂಗ್ ಮೂಲಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬಹುದಾಗಿದೆ ಎಂದರು.

ನಾನು ಕೂಡ ದಾವಣಗೆರೆಯಲ್ಲಿಯೇ ಇದ್ದುಕೊಂಡು ಬೆಂಗಳೂರಿನ `ಇನ್‌ಸೈಟ್ಸ್ ಐಎಎಸ್ ಸಂಸ್ಥೆಯಿಂದ ಆನ್‌ಲೈನ್ ತರಗತಿ ಅನುಸರಿಸಿ ಪ್ರಥಮ ಪ್ರಯತ್ನದಲ್ಲಿಯೇ ಪಾಸಾಗಿದ್ದೇನೆ ಎಂದು ಹೇಳಿದರು.

ಕೇವಲ ಅತಿಬುದ್ಧಿವಂತರಷ್ಟೇ ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಬಲ್ಲರು ಎಂಬ ಭಾವನೆ ಸರಿಯಲ್ಲ. ಸತತ ಪರಿಶ್ರಮ, ಏಕಾಗ್ರತೆ, ನಿರಂತರ ಅಧ್ಯಯನ ಶೀಲತೆ ಇದ್ದರೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡರೆ ಪರೀಕ್ಷೆ ಬರೆಯಲು ಸುಲಭವಾಗುತ್ತದೆ ಎಂದರು.

ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ದರಲ್ಲದೇ, ವನಿತಾ ಡಿಜಿಟಲ್ ಲೈಬ್ರರಿಗೆ ಅಗತ್ಯವಿರುವ ಪುಸ್ತಕಗಳನ್ನು ದೇಣಿಗೆ ರೂಪದಲ್ಲಿ ನೀಡಿದರು.

ವನಿತಾ ಡಿಜಿಟಲ್ ಲೈಬ್ರರಿ ಅಧ್ಯಕ್ಷೆ ರೇಖಾ ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವನಿತಾ ಸಮಾಜದ ಅಧ್ಯಕ್ಷೆ ಪದ್ಮ ಪ್ರಕಾಶ್, ಸಿಡಬ್ಲ್ಯುಸಿ ಅಧ್ಯಕ್ಷರಾದ ಉಷಾ ರಂಗನಾಥ್, ನಳಿನಿ ಅಚ್ಯುತ್  ಮತ್ತಿತರರು ಉಪಸ್ಥಿತರಿದ್ದರು.

ಸುಮಾ ಶಶಿಧರ್ ಪ್ರಾರ್ಥಿಸಿದರು. ಕಾರ್ಯದರ್ಶಿ ವಾಗ್ದೇವಿ ಸ್ವಾಗತಿಸಿ, ಸಾಧಕರ ಪರಿಚಯ ಮಾಡಿಕೊಟ್ಟರು. ಸುಜಾತ ಗಣೇಶ್ ನಿರೂಪಿಸಿದರು.ವಿಜಯಕುಮಾರಿ ವಂದಿಸಿದರು.

error: Content is protected !!