ಸಂಸ್ಥೆಯ ಮಕ್ಕಳ ಹುಟ್ಟುಹಬ್ಬದಂದು ಸಿಹಿ ವಿತರಣೆ ಮಾಡದೇ ಮಕ್ಕಳ ಪೋಷಕರು ನೀಡಿದ ಹಣವನ್ನು ಸೈನಿಕರ ಕ್ಷೇಮಾಭಿವೃದ್ಧಿ ನಿಧಿಗೆ ಸಮರ್ಪಿಸುವ ಮೂಲಕ ಸಮಾಜದ ಮೇಲಿರುವ ಸೈನಿಕರ ಋಣವನ್ನೂ ಸಹ ತೀರಿಸುವ ಕೆಲಸವನ್ನು ಶಾಲೆ ಮಾಡುತ್ತಿದೆ.
-ಡಿ.ಜಿ. ಸೋಮಪ್ಪ, ಖಜಾಂಚಿ, ಶಾಲಾ ಆಡಳಿತ ಮಂಡಳಿ
ಹೊನ್ನಾಳಿ, ಜೂ.11- ಪರಿಸರ ನಾಶದಿಂದ ಮನುಕುಲಕ್ಕೆ ಗಂಡಾಂತರ ಎಂದು ಶ್ರೀ ಸಾಯಿ ಗುರುಕುಲ ವಸತಿಯುತ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಡಿ.ಎಸ್. ಪ್ರದೀಪ್ ಗೌಡ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಹೊರವಲಯದಲ್ಲಿರುವ ಶ್ರೀ ಸಾಯಿ ಗುರುಕುಲ ವಸತಿಯುತ ಸಿ.ಬಿ.ಎಸ್.ಇ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲೆಡೆ ಪರಿಸರ ದಿನಾಚರಣೆಯ ದಿನದಂದು ನೆಪ ಮಾತ್ರಕ್ಕೆ ಪರಿಸರ ಕಾಳಜಿ ಮೆರೆದು ಸುಮ್ಮನಾಗಿ ಬಿಡುತ್ತಾರೆ. ಇನ್ನಾದರೂ ಸಸಿಗಳನ್ನು ನೆಟ್ಟು ಮರಗಳಾಗಿ ಪಾಲನೆ – ಪೋಷಣೆ ಮಾಡಲು ಮುಂದಾಗಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಸಲಹೆ ನೀಡಿದರು.
ಈ ವರ್ಷ ಹಿಂದೆಂದೂ ಕಾಣರಿಯದ ಭೀಕರ ಬರಗಾಲ ಮತ್ತು 40 ರಿಂದ 50 ಡಿಗ್ರಿ ತಾಪಮಾನ ಹೆಚ್ಚಳವಾಗಿ ಬಿಸಿಲಿನ ತಾಪಕ್ಕೆ ಜನ-ಜಾನುವಾರುಗಳು ಕಂಗೆಟ್ಟು ಹೋಗಿದ್ದು, ಇದು ಹವಾಮಾನ ವೈಪರೀತ್ಯದಿಂದಾಗಿ ಮುಂದಾಗಬಹುದಾದ ವಿನಾಶದ ಎಚ್ಚರಿಕೆ ಘಂಟೆಯಾಗಿದೆ ಎಂದು ತಿಳಿಸಿದರು. ಪ್ರತೀ ಮನೆಗಳ ಮುಂಭಾಗ, ತಮ್ಮ ಜಮೀನುಗಳಲ್ಲಿ ಗಿಡ – ಮರಗಳನ್ನು ಬೆಳೆಸಲು ಸಾರ್ವಜನಿಕರು ಮುಂದಾಗಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಸೌಮ್ಯ ಪ್ರದೀಪ್ ಗೌಡ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಲು ಸಂಸ್ಥೆಯ ವತಿಯಿಂದ ನಿರಂತರ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಂಸ್ಥೆಯ ಖಜಾಂಚಿ ಡಿ.ಜಿ. ಸೋಮಪ್ಪ ಮಾತನಾಡಿ, ಸಂಸ್ಥೆಗೆ ವಿಶಾಲವಾದ ಜಾಗವಿದ್ದು, ಶಾಲೆಯ ಆವರಣದಲ್ಲಿ ಗಿಡ – ಮರಗಳನ್ನು ಪಾಲನೆ – ಪೋಷಣೆ ಮಾಡಿ ಒಳ್ಳೆಯ ಪರಿಸರದಲ್ಲಿ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದು, ಶಾಲೆಯ ಪರಿಸರವನ್ನು ಗಮನಿಸಿ, ಜಿಲ್ಲೆಯಲ್ಲಿಯೇ ಉತ್ತಮ `ಪರಿಸರ ಮಿತ್ರ ಶಾಲೆ’ ಎಂಬ ಪ್ರಶಸ್ತಿಯು ಲಭಿಸಿದೆ ಎಂದು ಮಾಹಿತಿ ನೀಡಿದರು.
ಸ್ವಯಂ ಪ್ರೇರಿತವಾಗಿ ವಿದ್ಯಾರ್ಥಿಗಳು ಸಸಿಗಳನ್ನು ತಂದು ಶಾಲಾವರಣದಲ್ಲಿ ಸಸಿಗಳನ್ನು ನೆಟ್ಟು ಪಾಲನೆ – ಪೋಷಣೆ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಎ.ಜಿ.ಹರೀಶ್ ಕುಮಾರ್, ಶಿಕ್ಷಕರಾದ ಹರೀಶ್ ರಾಜ್ ಅರಸ್, ಮಧುಕುಮಾರ್, ತಿಪ್ಪೇಸ್ವಾಮಿ, ಶಕುಂತಲಾ, ಸ್ವರೂಪ, ರೇಷ್ಮಾ ಮತ್ತಿತರರು ಉಪಸ್ಥಿತರಿದ್ದರು.