ಬಹುಮುಖ ಪ್ರತಿಭೆ ದಿ. ದ್ವಾರಕೀಶ್‌ ಬದುಕಿನ ಪಯಣ

ಬಹುಮುಖ ಪ್ರತಿಭೆ ದಿ. ದ್ವಾರಕೀಶ್‌ ಬದುಕಿನ ಪಯಣ

ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆಯ ಜನಪ್ರಿಯ ವ್ಯಕ್ತಿ, ಹಿರಿಯ ನಟ, ನಿರ್ದೇಶಕ, ನಿರ್ಮಾಪಕ, ಪ್ರಚಂಡ ಕುಳ್ಳ ಎಂದೇ ಪ್ರಖ್ಯಾತರಾದ ದ್ವಾರಕೀಶ್ ಇಹಲೋಕ ತ್ಯಜಿಸಿದ್ದು, ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ.

ದ್ವಾರಕೀಶ್‌ ಅವರ  ಬದುಕಿನ ಪಯಣವನ್ನು ಸಂಕ್ಷಿಪ್ತ ವಾಗಿ ಮೆಲುಕು ಹಾಕಿ ನೋಡೋಣ.

1942 ಆಗಸ್ಟ್‌ 19ರಂದು ಜನಿಸಿದ ಇವರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ ಅಪರೂಪದ ನಟ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್, ರಜನಿಕಾಂತ್, ಶ್ರೀನಾಥ್, ಅಂಬರೀಶ್, ಟೈಗರ್ ಪ್ರಭಾಕರ್‌ರವರಂತಹ  ಮೇರು ನಟರೊಂದಿಗೆ ನಟಿಸಿದ ಮೇಧಾವಿ. ಅವರು ಹೆಸರು ಮಾಡಿದ ಚಿತ್ರಗಳೆಂದರೆ ಮೇಯರ್ ಮುತ್ತಣ್ಣ, ಕುಳ್ಳ ಏಜೆಂಟ್ 000, ಭಕ್ತ ಕುಂಬಾರ, ಭಾಗ್ಯವಂತರು, ಗುರು-ಶಿಷ್ಯರು, ಆಪ್ತಮಿತ್ರ, ದೇವರದುಡ್ಡು. ಅವರದೇ ಆದ ವಿಶಿಷ್ಟ ಶೈಲಿಯಿಂದ ಪ್ರಾರಂಭದಲ್ಲಿ ಒಬ್ಬ ಹಾಸ್ಯ ನಟರಾಗಿ, ನಟರಾಗಿ, ಪೋಷಕ ನಟರಾಗಿ ನಟಿಸಿ ಅಪಾರ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿದ್ದಾರೆ.

ಹೀಗೆ 300 ಚಿತ್ರಗಳಲ್ಲಿ ನಟನೆ, 30 ಚಿತ್ರಗಳ ನಿರ್ದೇಶನ, 50 ಚಿತ್ರಗಳನ್ನು ನಿರ್ಮಾಣ, ಮಾಡಿದ್ದಾರೆ. ಚಿತ್ರರಂಗದಲ್ಲಿ ಅಪಾರ ಪ್ರೀತಿ ಹೊಂದಿದ್ದ ದ್ವಾರಕೀಶ್ ಅವರು ಸದಾ ಸಿನಿಮಾ, ಸಿನಿಮಾ, ಸಿನಿಮಾ… ಅಂತಲೇ ತಮ್ಮ ಜೀವನವನ್ನು ಚಿತ್ರರಂಗಕ್ಕೆ ಮುಡುಪಾಗಿಟ್ಟಿದ್ದ ಧೀಮಂತ ವ್ಯಕ್ತಿ.

ಸಿನಿಮಾ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಹೊಸ ಹೊಸ ಆಲೋಚನೆಗಳೊಂದಿಗೆ ಕಠಿಣ ಸಾಹಸಕ್ಕೆ ಕೈ ಹಾಕುವ ಹುಚ್ಚಿನಲ್ಲಿ ಸಿನಿಮಾಗಳನ್ನು ನಿರ್ಮಿಸುವ ಕನಸು ಹೊಂದಿದ್ದ ದ್ವಾರಕೀಶ್ ಅವರು ಅನೇಕ ಹೊಸ ಪ್ರತಿಭೆ ಹೊಂದಿ ರುವ ನಟರನ್ನು ಚಿತ್ರರಂಗಕ್ಕೆ ಪರಿಚ ಯಿಸಿ ಬೆಳೆಸಿದ್ದಾರೆ ಮತ್ತು ಮಾರ್ಗ ದರ್ಶಕರಾಗಿ ಪ್ರೋತ್ಸಾಹಿಸಿದ್ದಾರೆ.

ಸದಾ ಹುರುಪು, ಹುಮ್ಮಸ್ಸಿನಿಂದ ಇದ್ದ ಶ್ರೀ ದ್ವಾರಕೀಶ್‌ರವರು ಹೆಸರಿಗೆ ಕುಳ್ಳ ಅಷ್ಟೇ. ಆದರೆ ಚಿತ್ರರಂಗ ಕ್ಷೇತ್ರದಲ್ಲಿ ಮತ್ತು ಅನುಭವದಲ್ಲಿ  ಬಹಳ ಎತ್ತರಕ್ಕೆ ಬೆಳೆದಂತಹ ಮೇಧಾವಿ. ಚಿತ್ರರಂಗದಲ್ಲಿ ಅನೇಕ ಏರು-ಇಳಿವು, ಸೋಲು-ಗೆಲುವು ಅನುಭವಿಸಿ ದ್ದರು. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಎಲ್ಲವುಗಳನ್ನು ಸಮನಾಗಿ ಎದುರಿಸಿ ಮತ್ತೆ ಗೆದ್ದೆ ಗೆಲ್ಲುತ್ತೇನೆ ಎಂಬ ಭರವಸೆ, ಆಸೆ ಮತ್ತು ನಂಬಿಕೆ ಹೊಂದಿದ ಉತ್ಸಾಹದ ಚಿಲುಮೆಯೊಂದಿಗೆ ಅದ್ಭುತ ಸಾಧನೆ ಮಾಡಿದ್ದಾರೆ.

ಇದು ಸಾಮಾನ್ಯ ಸಾಧನೆಯಲ್ಲ. ಹೀಗೆ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಎಲ್ಲರ ಮನಸ್ಸಿನಲ್ಲಿ ಮಾಸದೇ ಉಳಿದಿರುವ ಜನಪ್ರಿಯ ನಟ, ಕನ್ನಡದ ಕಣ್ಮಣಿ ದ್ವಾರಕೀಶ್‌ರವರು 1967 ಏಪ್ರಿಲ್ 26ರಂದು ಶ್ರೀಮತಿ ಅಂಬುಜಾ ಅವರನ್ನು ಮದುವೆಯಾದರು. ಇಬ್ಬರು ಪತ್ನಿ ಯರು ಮೊದಲ ಪತ್ನಿ ಅಂಬುಜಾ, ಎರಡನೇ ಪತ್ನಿ ಶೈಲಜಾ, ಮೊದಲ ಪತ್ನಿ ಅಂಬುಜಾ ಅವರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಇವರಿಗೆ ಒಟ್ಟು ಐದು ಜನ ಗಂಡು ಮಕ್ಕಳು. ಇವರದು ಸುಖೀ ಕುಟುಂಬ.


– ಹೆಚ್.ವಿ. ಮಂಜುನಾಥ ಸ್ವಾಮಿ, ದಾವಣಗೆರೆ. 98448 82366

error: Content is protected !!