ಸ್ವಚ್ಚ ಪರಿಸರ- ಆರೋಗ್ಯಕರ ಜೀವನ

ಸ್ವಚ್ಚ ಪರಿಸರ- ಆರೋಗ್ಯಕರ ಜೀವನ

ಪ್ರತಿವರ್ಷ ಜೂನ್ ತಿಂಗಳ  5  ನೇ ತಾರೀಖಿ ನಂದು ವಿಶ್ವವ್ಯಾಪಿ  “ವಿಶ್ವ ಪರಿಸರ ದಿನಾಚರಣೆ” ಯನ್ನು ಆಚರಿಸಲಾಗುತ್ತದೆ. ಪರಿಸರ ದಿನ ಆಚರಿಸುವ ಪ್ರಮುಖ ಉದ್ದೇಶವೆಂದರೆ ಜನರಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವುದು. ಈ ಸಂದರ್ಭದಲ್ಲಿ, ಪ್ರಪಂಚದಾದ್ಯಂತ ಜಾಗೃತಿ ಅಭಿಯಾನವನ್ನು ಆಯೋಜಿಸಲಾಗುತ್ತದೆ. ಇದರಿಂದಾಗಿ ಮಾನವರು ಮತ್ತು ಪ್ರಾಣಿಗಳು ಶುದ್ಧಪರಿಸರದಲ್ಲಿ ಮುಕ್ತವಾಗಿ ಉಸಿರಾಡಬಹುದು.

ಪರಿಸರ ದಿನಾಚರಣೆಯನ್ನು ಆಚರಿಸಬೇಕೆಂಬ ನಿರ್ಧಾರವನ್ನು 1972 ರ ಸ್ಟಾಕ್ ಹೋಂ (ಸ್ವೀಡನ್  ದೇಶ)  ನಲ್ಲಿ ನಡೆದ  ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ತೆಗೆದುಕೊಳ್ಳಲಾಯಿತು. ತದ ನಂತರ ಎರಡು ವರ್ಷಗಳ ಬಳಿಕ ಅಂದರೆ 1974 ರಿಂದ ಮೊಟ್ಟಮೊದಲನೆಯದಾಗಿ ವಿಶ್ವದಾದ್ಯಂತ ವಿಶ್ವ ಪರಿಸರ ದಿನಾಚರಣೆಯನ್ನು “ಜೀವಿಸಲು ಭೂಮಿಯೊಂದೇ” ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರಾರಂಭವಾಯಿತು. ಈ ದಿನದಂದು, ಪರಿಸರ ಪ್ರೇಮಿಗಳೆಲ್ಲ ಪ್ರಪಂಚದಾದ್ಯಂತ ಗಿಡಗಳನ್ನು ನೆಟ್ಟು ಸಂಭ್ರಮಿಸುತ್ತಾರೆ. ನಮ್ಮ ನೆಲ, ನಾವೆಲ್ಲರೂ ವಾಸಿಸುವ ಭೂಮಿ, ಬೆಳೆಯುವ ಆಹಾರ, ಹೀಗೆ ಎಲ್ಲವೂ ಸಮೃದ್ದಿಯಿಂದ ಉಳಿಯುವಂತಾಗಲು ಈ ದಿನವನ್ನು ಜಾಗೃತ ದಿನವೆಂದು ಆಚರಿಸಲಾಗುತ್ತಿದೆ.

ಪ್ರತೀವರ್ಷ ಪರಿಸರ ದಿನಾಚರಣೆಯನ್ನು ವಿಧ-ವಿಧವಾದ ಧ್ಯೇಯ ವಾಕ್ಯಗಳೊಂದಿಗೆ  ಹಾಗು ಜಾಗತಿಕ ಅತಿಥೇಯ ದೇಶದೊಂದಿಗೆ ಆಚರಿಸುವ ಚಾಲ್ತಿಯಿದೆ.  

“ಪ್ರಸ್ತುತ ವರ್ಷದ ಅತಿಥೇಯ ದೇಶವಾಗಿ ಸೌದಿ ಅರೇಬಿಯ ವನ್ನು ಆಯ್ಕೆ ಮಾಡಲಾಗಿದೆ ಹಾಗೂ “ವಿಶ್ವ ಪರಿಸರ ದಿನ”ದ ಅಭಿಯಾನವು “ನಮ್ಮಭೂಮಿ” ಎಂಬ  ಘೋಷವಾಕ್ಯದಡಿಯಲ್ಲಿ ಭೂಮಿ ಪುನಃಸ್ಥಾಪನೆ, ಮರುಭೂಮೀಕರಣ ಮತ್ತು ಬರ ನಿರೋಧಕತೆ ಮೇಲೆ ಕೇಂದ್ರೀಕರಿಸುತ್ತದೆ”.

ನಮ್ಮ ಹಿರಿಯರು ಉತ್ತಮ ಪರಿಸರದ ಜೊತೆಗೆ ಆರೋಗ್ಯವಂತರಾಗಿ  ವರ್ಷಾನುಗಟ್ಟಲೇ ಬದುಕಿದವರು. ವಿದ್ಯಾಭ್ಯಾಸದಲ್ಲಿ ಹಿಂದಿದ್ದರೂ ಸಹ, ನಿಸರ್ಗದ ಅಭಿವೃದ್ಧಿಗಾಗಿ ಪ್ರಕೃತಿಯ ಕಾಳಜಿ ವಹಿಸಿದರು. ಆದರೆ, ಆಧುನಿಕತೆ ಬೆಳೆದಂತೆ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಪರಿಸರದ ಕಾಳಜಿ ಕ್ಷೀಣಿಸುತ್ತಿದೆ. ಆದ್ದರಿಂದ, ಈ ದಿನದಂದು ಜನರೆಲ್ಲರನ್ನೂ ಒಟ್ಟುಗೂಡಿಸಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯಗಳು ನಡೆಯಬೇಕು. ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು.

ಪರಿಸರ ರಕ್ಷಣೆ – ನಮ್ಮೆಲ್ಲರ ಹೊಣೆ.  ಪರಿಸರದ ಉಳಿವಿಗಾಗಿ ಪ್ರತಿಯೊಬ್ಬರು ಪರಿಸರ ಪ್ರೇಮಿಗಳಾಗಬೇಕು. ಇಂದಿನ ಬದಲಾದ ವಾತವರಣ ಹಾಗು ದಿನೇ- ದಿನೇ ಸಾಕಷ್ಟು ಏರಿಳಿಕೆಯಾಗುತ್ತಿರುವ ಹವಾಮಾನಕ್ಕೆ ಅನುಗುಣವಾಗಿ ಹೆಚ್ಚೆಚ್ಚು ಗಿಡ- ಮರಗಳನ್ನು ಬೆಳೆಸಿ, ಪರಿಸರವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪರಿಸರದ ಪ್ರಾಮುಖ್ಯತೆ ಏನೆಂಬುದನ್ನು ಶಾಲಾ- ಕಾಲೇಜುಗಳಿಂದಲೇ ಪ್ರಾರಂಭವಾಗಬೇಕು. ಪಠ್ಯ- ಪಸ್ತಕಗಳಲ್ಲಿ ಪರಿಸರದ ಅಳಿವು-ಉಳಿವಿನ ಬಗೆಗೆ ಸಾಕಷ್ಟು ಮಾಹಿತಿ ನೀಡುವುದರ ಜೊತೆಜೊತೆಗೆ ಗಿಡ ನೆಡುವ- ಬೆಳೆಸುವ-ಪೋಷಿಸುವ ಕೆಲಸಗಳು ನಡೆಯುತ್ತಿರಬೇಕು. ಪ್ರಕೃತಿಯ ಜೊತೆ ಮಕ್ಕಳು ಬೆರೆಯಬೇಕು. ಆಗ ಪರಿಸರವು ತಾನಾಗಿಯೇ ಉಳಿಯುತ್ತದೆ.

ಪರಿಸರವನ್ನು ಉಳಿಸಬಹುದಾದ ಕೆಲವು ಉತ್ತಮ ಸಲಹೆಗಳು : λ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

  • ನಿಮ್ಮಗಳ  ಮನೆಯ ಮುಂದೆ ಪ್ರತಿವರ್ಷ ಒಂದು ಸಸ್ಯವನ್ನುನೆಟ್ಟು, ಅದನ್ನುಆರೈಕೆ ಮಾಡಿ ಮತ್ತು ಅದು ಮರವಾಗುವವರೆಗೆ ಅದನ್ನು ಪೋಷಿಸಿ ಬೆಳೆಸಿ. ಅದು ವಿಷಕಾರಿ ಅನಿಲಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
  • ನಿಮ್ಮ ಕಟ್ಟಡದಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ ತಂತ್ರಜ್ಞಾನವನ್ನು ಬಳಸಿ
  • ಫ್ಯಾನ್, ಟ್ಯೂಬ್ಲೈಟ್, ಕೂಲರ್, ಎಸಿ, ಕಂಪ್ಯೂಟರ್  ಮುಂತಾದ ವಿದ್ಯುತ್ ಉಪಕರಣಗಳನ್ನು ನಿಮ್ಮ ಕೆಲಸ ಮುಗಿದ ಕೂಡಲೇ ಬಂದ್ ಮಾಡಬೇಕು.
  • ವಾತಾವರಣದಲ್ಲಿ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡಲು ಸೌರಶಕ್ತಿ ಮತ್ತು ಶುದ್ಧ ಇಂಧನವನ್ನುಬಳಸಿ.
  • ನೀರು ಪೋಲಾಗದಂತೆ ನಿಯಮಿತವಾಗಿ ಬಳಸಬೇಕು. ನೀರನ್ನು ಬಳಸಿದ ನಂತರ, ತಕ್ಷಣ ನಲ್ಲಿಯನ್ನು ಬಂದ್ ಮಾಡಿ. ಬಟ್ಟೆಒಗೆದ ನಂತರ, ಆ ನೀರಿನಿಂದ ನೆಲವನ್ನು ಸ್ವಚ್ಛಗೊಳಿಸಬಹುದು. ಇದರಿಂದ ಅದನ್ನು ಮರುಬಳಕೆ ಮಾಡಿದಂತಾಗುತ್ತದೆ.
  • ಪ್ಲಾಸ್ಟಿಕ್  ಬಳಕೆಗೆ ಕಡಿವಾಣ ಹಾಕಿ.
  • ವಾಯುಮಾಲಿನ್ಯವನ್ನು ತಡೆಯಲು ಪೆಟ್ರೋಲ್ – ಡೀಸೆಲ್ ವಾಹನಗಳ ಮೇಲಿನ ಅವಲಂಬನೆ ಕಡಿಮೆಯಾಗಬೇಕು.
  • ಕೈಗಾರಿಕೆಗಳಿಂದ ಹೊರಬರುವ ರಾಸಾಯನಿಕ ತ್ಯಾಜ್ಯಗಳು ನೀರಿನ ಪಾಲಾಗದಂತೆ ಎಚ್ಚರ ವಹಿಸಿ ಜಲಮಾಲಿನ್ಯವನ್ನು ತಡೆಯಬೇಕು.
  • ಅರಣ್ಯ ಸಂಪತ್ತನ್ನು ನಾಶ ಮಾಡದೆ, ಹಸಿರು ಸಸಿಗಳನ್ನು ಬೆಳೆಸಿ ಪರಿಸರವನ್ನು ಸ್ವಚ್ಚವಾಗಿಡಬಹುದು.

ವನಮಹೋತ್ಸವ ಆಚರಣೆ : ರಾಷ್ಟ್ರದಾದ್ಯಂತ ಪ್ರತಿಯೊಂದು ಶಾಲಾ- ಕಾಲೇಜು, ಸಂಘ ಸಂಸ್ಥೆಗಳಲ್ಲಿ ಜೂನ್ 5 ರಂದು ಗಿಡಗಳನ್ನು ನೆಡುವುದರ ಮೂಲಕ ವನ ಮಹೋತ್ಸವವನ್ನು ಆಚರಿಸುತ್ತಾರೆ. ಈ ಕಾರ್ಯವು  ಕೇವಲ  ಒಂದು ದಿನಕ್ಕೆ/ ತಿಂಗಳಿಗೆ ಸೀಮಿತವಾಗಿರದೇ, ವರ್ಷಪೂರ್ತಿ ಗಿಡಗಳನ್ನು ನೆಟ್ಟು ನಮ್ಮ ಪರಿಸರವನ್ನು ರಕ್ಷಿಸಿಕೊಳ್ಳಬೇಕು.

ಪ್ರತಿಯೊಬ್ಬರಿಗೂ ಮಾಲಿನ್ಯ ಮುಕ್ತ ಪರಿಸರದ ಪ್ರಾಮುಖ್ಯತೆ ಮತ್ತು ಹಾನಿಯ ನಷ್ಟವನ್ನು ಮನದಟ್ಟು ಮಾಡಿ, ಮುಂದಿನ ಪೀಳಿಗೆಗೆ ವೈಯಕ್ತಿಕ ಆಸ್ತಿ- ಅಂತಸ್ತು ಗಳನ್ನು ಮಾಡುವ ಬದಲಿಗೆ ಪರಿಶುದ್ಧ ಗಾಳಿ- ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡುವ ಪಣತೊಟ್ಟು,  ಪರಿಸರದ ಅಭಿವೃದ್ಧಿಯಾದರೆ “ವಿಶ್ವಪರಿಸರ ದಿನ”ಕ್ಕೆ ಮಹತ್ವ ಬಂದಂತಾಗುತ್ತದೆ.


– ಡಾ. ಪ್ರಮೋದ್ ಜಿ.ವಿ., ಡಾ. ದೀಪಶ್ರೀ ಪ್ರಮೋದ್ ಗುಜ್ಜರ್, ಬಾಪೂಜಿ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ದಾವಣಗೆರೆ.

error: Content is protected !!