ಹರಿಹರ : ಸಮರ್ಪಕ ನೀರು ಪೂರೈಸಿ, ಇಲ್ಲದಿದ್ದಲ್ಲಿ ಕಂದಾಯ ಭರಿಸಲ್ಲ
ಹರಿಹರ ಬೆಂಕಿನಗರ ಹಾಗೂ ಇಂದ್ರಾನಗರ ಸೇರಿದಂತೆ, ಕೆಲವು ಬಡಾವಣೆಗಳಲ್ಲಿ ಜಲಸಿರಿ ನಲ್ಲಿಗೆ ಮೋಟಾರು ಬಳಕೆ ಮಾಡುತ್ತಿರುವ ಪರಿಣಾಮ ಹಲವು ಮನೆಗಳಿಗೆ ನೀರು ತಲುಪದೇ ಇರುವುದರಿಂದ ನಿವಾಸಿಗಳು ತೊಂದರೆ ಪಡುತ್ತಿದ್ದಾರೆ. ನೀರಿನ ತೊಂದರೆ ನೀಗಿಸಲು ಪೌರಾಯುಕ್ತ ಐಗೂರು ಬಸವರಾಜ್ ಮತ್ತು ಜಲಸಿರಿ ಅಧಿಕಾರಿ ನವೀನ್ ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಶ್ರಮ ವಹಿಸುತ್ತಿದ್ದಾರೆ.
ಇಂದ್ರಾನಗರ ಮತ್ತು ಬೆಂಕಿನಗರದಲ್ಲಿ ಮೀಟರ್ ನಲ್ಲಿಗೆ ಮೋಟಾರ್ ಬಳಕೆ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಸಾರ್ವಜನಿಕರಿಗೆ ಮೋಟಾರ್ ಬಳಕೆ ಮಾಡದಂತೆ ತಿಳಿ ಹೇಳಿದ್ದೇನೆ. ನಿಯಮ ಮೀರಿದ್ದಲ್ಲಿ ಸರ್ಕಾರದ ನಿರ್ದೇಶನದಂತೆ 5 ಸಾವಿರ ರೂ.ಗಳ ದಂಡ ಹಾಕಲಾಗುವುದು.
– ಐಗೂರು ಬಸವರಾಜ್, ಪೌರಾಯುಕ್ತ
ಜಲಸಿರಿ ಅಧಿಕಾರಿಗಳು, ಬಡಾವಣೆಯ ಎತ್ತರದ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದರೆ ಸಮಸ್ಯೆ ಬಗೆಹರಿಯಲಿದೆ. ಆದರೆ ಸಮರ್ಪಕ ನೀರು ಪೊರೈಸದೇ ಇದ್ದಲ್ಲಿ, ನಿವಾಸಿಗಳೆಲ್ಲರೂ ನಗರಸಭೆ ಮುಂದೆ ಖಾಲಿ ಕೊಡ ಹಿಡಿದು ಪ್ರತಿಭಟನೆ ಮಾಡಲಿದ್ದೇವೆ.
– ಎಂ.ಎಸ್. ಬಾಬುಲಾಲ್, ನಗರಸಭಾ ಸದಸ್ಯ
ಇಂದ್ರಾನಗರ ಮತ್ತು ಬೆಂಕಿನಗರ ಸೇರಿದಂತೆ ನಾಲ್ಕು ಬಡಾವಣೆಗಳ ಜನರು ನೀರು ಸರಬರಾಜು ನಿಲ್ಲಲಿದೆ ಎಂಬ ಆತಂಕದಿಂದ ಮೋಟಾರ್ ಹಚ್ಚುತ್ತಿದ್ದಾರೆ. ಮನೆಗಳಿಗೆ ಭೇಟಿ ನೀಡಿ ಇನ್ನೂ ಕೆಲವು ದಿನಗಳ ಕಾಲ ನೀರು ಬರಲಿದೆ ಎಂದು ಮೋಟಾರ್ ತೆರವುಗೊಳಿಸಿ ತಿಳಿಹೇಳಿ ಬಂದಿದ್ದೇವೆ.
– ನವೀನ್ ಕುಮಾರ್, ಜಲಸಿರಿ ಇಲಾಖೆಯ ಅಧಿಕಾರಿ
ಇಂದಿರಾ ನಗರ ಮತ್ತು ಬೆಂಕಿನಗರದ ಎತ್ತರ ಪ್ರದೇಶಗಳಲ್ಲಿ ವಾಸವಿರುವ ಬಹುತೇಕ ಮನೆಗಳಿಗೆ ಸಮರ್ಪಕ ನೀರು ತಲುಪುತ್ತಿಲ್ಲ. ಕಾರಣ ನಲ್ಲಿಗಳಿಗೆ ಮೋಟಾರ್ ಬಳಕೆ ಮಾಡಿ ನೀರು ಶೇಖರಣೆ ಮಾಡುತ್ತಿದ್ದಾರೆ. ಕೆಲವರು ನಲ್ಲಿಗೆ ಮೋಟಾರ್ ಬಳಕೆ ಮಾಡಿ ನೀರು ಸಂಗ್ರಹ ಮಾಡುವುದರಿಂದ ನಮಗೆ ನೀರು ಸಿಗುತ್ತಿಲ್ಲವೆಂದು ಸ್ಥಳೀಯರು, ನಗರಸಭೆ ಮತ್ತು ಜಲಸಿರಿ ಅಧಿಕಾರಿಗಳ ಮೇಲೆ ಆಕ್ರೋಶ ಹೊರಹಾಕುತ್ತಿದ್ದಾರೆ ಮತ್ತು ನೀರಿನ ಕಂದಾಯ ಭರಿಸುವುದಿಲ್ಲ ಎಂಬುದಾಗಿಯೂ ಎಚ್ಚರಿಕೆ ನೀಡುತ್ತಿದ್ದಾರೆ.
ಬಡಾವಣೆಯ ಜನರು ಕೂಲಿ ಕಾರ್ಮಿಕರು ಆಗಿದ್ದರಿಂದ ನೀರು ತುಂಬುವುದಕ್ಕಾಗಿಯೇ ಕೆಲಸಕ್ಕೆ ರಜೆ ಮಾಡುವಂತಾಗಿದ್ದು, ನೀರು ಸಂಗ್ರಹಿಸುವುದೇ ಒಂದು ಕಾಯಕವಾಗಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಇಲ್ಲಿನ ಸಮಸ್ಯೆ ಬಗೆಹರಿಸುವಂತೆ ಇಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.
– ಎಂ. ಚಿದಾನಂದ ಕಂಚಿಕೇರಿ