ಹರಪನಹಳ್ಳಿ : ನಿವೃತ್ತ ಯೋಧರಾದ ಚಂದ್ರಪ್ಪ, ಸಂತೋಷ್ ಅವರಿಗೆ ಸ್ವಾಗತ, ಸನ್ಮಾನ
ಹರಪನಹಳ್ಳಿ, ಮೇ 12- ಸೇವಾ ನಿವೃತ್ತಿ ಹೊಂದಿದ ಬಳಿಕ ಗ್ರಾಮಕ್ಕೆ ಆಗಮಿಸಿದ ಸೈನಿಕರಾದ ಚಂದ್ರಪ್ಪ ಹಾಗೂ ಸಂತೋಷ್ ಕುಮಾರ್ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.
ತಾಲ್ಲೂಕಿನ ಹಲವಾಗಲು ಗ್ರಾಮದ ವಿಶ್ವಚೇತನ ಸಂಘಟನೆಯ ನೇತೃತ್ವದಲ್ಲಿ ನಿವೃತ್ತ ಸೈನಿಕರನ್ನು ಅತ್ಮೀಯವಾಗಿ ಬರಮಾಡಿಕೊಂಡು ಗ್ರಾಮದಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು.
ಈ ವೇಳೆ ವಿಜಯನಗರ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ್ ಮಾತನಾಡಿ, ದೇಶದೊಳಗಿನ ಜನರ ಸುರಕ್ಷತೆ ಕಾಪಾಡುವ ಯೋಧರು ದೇವರಿಗೆ ಸರಿಸಮಾನರು. ದೇಶದ ರಕ್ಷಣೆಗಾಗಿ ಸೇನೆಗೆ ಸೇರಿ ಮಳೆ, ಗಾಳಿ, ಶೀತ ಲೆಕ್ಕಿಸದೇ ಪ್ರಾಣ ಪಣಕ್ಕಿಟ್ಟು ಹೋರಾಟ ಮಾಡುವ ಸೈನಿಕರನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದರು.
ಸೈನಿಕರು ನಿವೃತ್ತಿ ಹೊಂದಿದ ಬಳಿಕ ಸಮಾಜಮುಖಿ ಕಾರ್ಯದಲ್ಲಿ ತೊಡಗುವ ಜತೆಗೆ ಯುವಕರಿಗೆ ಮಾರ್ಗದರ್ಶನ ಮಾಡುತ್ತಾ ಸುಂದರ ಸಮಾಜ ನಿರ್ಮಿಸಬೇಕು ಎಂದು ಹೇಳಿದರು.
ವಾಲ್ಮೀಕಿ ನಾಯಕ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಎಚ್.ಟಿ. ವನಜಾಕ್ಷಮ್ಮ ಮಾತನಾಡಿ, ಸೈನಿಕರ ಪರಿಶ್ರಮದಿಂದ ದೇಶದ ಜನ ಸುಖ-ಸಂತೋಷದಿಂದ ಇರಲು ಸಾಧ್ಯ. ಆತಂಕವಾದಿಗಳು ಮತ್ತು ನೈಸರ್ಗಿಕ ವಿಕೊಪದಿಂದ ನಮ್ಮನ್ನು ರಕ್ಷಿಸಲು ಯೋಧರು ಸದಾ ಮುಂದಿರುತ್ತಾರೆ ಎಂದರು.
ಯೋಧರು ದೇಶದ ಸಂಪತ್ತು. ಅವರಲ್ಲಿರುವ ದೇಶಾಭಿಮಾನ ಭದ್ರತೆಗೆ ಸಾಕ್ಷಿಯಾಗಿದೆ. ಆದ್ದರಿಂದ ಯುವಕರು ದೇಶಸೇವೆಗೆ ಮುಂದೆ ಬರಬೇಕು ಎಂದು ಯುವಕರಿಗೆ ಸಲಹೆ ನೀಡಿದರು.
ಸೈನಿಕರಾದ ಚಂದ್ರಪ್ಪ ಹಾಗೂ ಸಂತೋಷ್ ಕುಮಾರ್ ಮಾತನಾಡಿ, ತಂದೆ-ತಾಯಿ ಮಕ್ಕಳನ್ನು ಬಿಟ್ಟು ಸೈನಿಕರಾಗಿ ದೇಶ ಸೇವೆ ಮಾಡಿದ್ದಕ್ಕೆ ಇಂದು ನಿಜವಾದ ಗೌರವ ಸಿಕ್ಕಿದೆ, ನಾವು ಸೇನೆಯಿಂದ ಮಾತ್ರ ನಿವೃತ್ತಿ ಆಗಿದ್ದೇವೆ. ಆದರೆ ದೇಶ ಸೇವೆಗೆ ಸದಾ ಸಿದ್ಧ ಎಂದರು.
ಜಿಲ್ಲೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಬೇಕು ಎಂದು ನಿವೃತ್ತ ಯೋಧ ಆನಂದ್ ಆಶಯ ವ್ಯಕ್ತಪಡಿಸಿದರು..
ಸಾಹಿತಿ ಇಸ್ಮಾಯಿಲ್ ಎಲಿಗಾರ್, ಗ್ರಾ.ಪಂ. ಮಾಜಿ ಅಧ್ಯಕ್ಷ ದ್ಯಾಮಪ್ಪ, ಲಿಂಗರಾಜ್, ಮುಖಂಡ ಮಾಲತೇಶ್ ಮಾರೇಗೌಡ, ನಿಲಯಪಾಲಕ ಎನ್.ಜಿ. ಬಸವರಾಜ ಹಾಗೂ ಗ್ರಾಮದ ಮುಖಂಡರು ಇದ್ದರು.