ಹರಿಹರ, ಮೇ 12 – ಮಾನವ ಕಲ್ಯಾಣ ಬಯಸುವ ಅನೇಕರಿಗೆ ಸಾಂಸ್ಕೃತಿಕ ನಾಯಕ ಬಸವಣ್ಣ ಸ್ಪೂರ್ತಿ ದಾಯಕ ಎಂದು ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ ಹೇಳಿದರು.ನಗರದ ಬಸವೇಶ್ವರ ಸೇವಾ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ `ಬಸವ ಜಯಂತಿ’ಯ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಂಸ್ಕೃತಿಕ ನಾಯಕ ಬಸವಣ್ಣ ತಮ್ಮ ಸರಳ ವಚನಗಳ ಮೂಲಕ ಸಮಾಜದ ಅಂಕು ಡೊಂಕು ತಿದ್ದುವ ಪ್ರಯತ್ನ ಮಾಡುವ ಜತೆಗೆ, ಬಿಜ್ಜಳನ ಆಸ್ಥಾನದಲ್ಲಿ ಅನುಭವ ಮಂಟಪ ಎಂಬ ಅಧ್ಯಾತ್ಮಿಕ ಪ್ರಜಾಪ್ರಭುತ್ವ ಸ್ಥಾಪಿಸಿದ್ದರು ಎಂದು ಹೇಳಿದರು.
ಬಸವಣ್ಣನವರ ತತ್ವಾದರ್ಶಗಳನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಂಡು ಉತ್ತಮ ಜೀವನ ಸಾಗಿಸಬೇಕೆಂದು ಯುವಕರಿಗೆ ಕಿವಿಮಾತು ನೀಡಿದರು.
ನಗರದ ಮುರುಘರಾಜೇಂದ್ರ ಕಲ್ಯಾಣ ಮಂಟಪದಿಂದ ಪ್ರಾರಂಭವಾದ ಪಲ್ಲಕ್ಕಿ ಉತ್ಸವದ ಮೆರವಣಿಗೆ ಕಲಾತಂಡದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
ಈ ವೇಳೆ ಡಿ.ಜಿ. ಶಿವಾನಂದಪ್ಪ, ವಕೀಲ ಬಸವರಾಜ್ ಓಂಕಾರಿ, ವೀರೇಶ್ ಯಾದವಾಡ, ಎಂ. ಚಿದಾನಂದ ಕಂಚಿಕೇರಿ, ರುದ್ರೇಶ್ ತಿಪ್ಪಣ್ಣನವರ್, ರವಿಕುಮಾರ್, ಅರುಣ್ ಕುಮಾರ್, ಟಿ.ಜೆ. ಮುರುಗೇಶ್, ಚಂದ್ರಪ್ಪ, ಕತ್ತಲಗೇರೆ ಶಿವಯೋಗಿ ಸ್ವಾಮಿ ಮತ್ತು ಇತರರಿದ್ದರು.