ದಾವಣಗೆರೆ, ಏ.25- ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಬೆಂಬಲ ಸೂಚಿ ಸಿರುವುದಾಗಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಡಾ.ವೈ. ರಾಮಪ್ಪ ಹೇಳಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿಕೊಂಡು ಬಂದಿದ್ದೇನೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಕೆಲವರ ಕೈಯಲ್ಲಿ ಮಾತ್ರವೇ ಸಿಲುಕಿರುವ ಕಾರಣ ಆಂತರಿಕ ಪ್ರಜಾಪ್ರಭುತ್ವಕ್ಕೆ ಗೌರವ ಇಲ್ಲವಾಗಿದೆ. ಆದ್ದರಿಂದ ಮನನೊಂದು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದರು. ಈ ಮಧ್ಯೆ ಭೋವಿ ಮತ್ತು ಇತರೆ ಸಮಾಜಗಳ ಮುಖಂಡರು, ಸಮಾನ ಮನಸ್ಕರು ಜೊತೆಗೂಡಿ ಚರ್ಚಿಸಿ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ದೇಶದ ಐಕ್ಯತೆ ಮತ್ತು ಸುಭದ್ರತೆ ದೃಷ್ಟಿಯಿಂದ ನಾವೆಲ್ಲರೂ, ಯಾವುದೇ ಷರತ್ತು ಇಲ್ಲದೇ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಬೆಂಬಲ ಸೂಚಿಸಿದ್ದು, ಅವರ ಗೆಲುವಿಗಾಗಿ ಕ್ಷೇತ್ರಾದ್ಯಂತ ಪ್ರವಾಸ ಮಾಡಿ, ಮತ ಹಾಕಿಸಲು ಸಂಕಲ್ಪ ಮಾಡಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕೆ.ಎಚ್. ಚನ್ನಬಸಪ್ಪ, ತಿಮ್ಮಪ್ಪ, ಕೃಷ್ಣಪ್ಪ, ಅಂಜಿನಪ್ಪ ಇದ್ದರು.