ದಾವಣಗೆರೆ, ಏ.23- ಮರಳು ಗಣಿಗಾರಿಕೆ ಮಾಲೀಕರ ಸಹೋದರನೊಬ್ಬ ಹರಿಹರ ಶಾಸಕ ಬಿ.ಪಿ. ಹರೀಶ್ ಅವರಿಗೆ ಪ್ರಾಣ ಬೆದರಿಕೆ ಹಾಕಿದ್ದು, ಅವರನ್ನು ಬಂಧಿಸಬೇಕು ಹಾಗೂ ಶಾಸಕ ಹರೀಶ್ ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ಹೇಳಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ ತಾಲ್ಲೂಕಿನ ಚಿಕ್ಕಬಿದರಿ ಗ್ರಾಮ ಮತ್ತು ಹರಪನಹಳ್ಳಿ ತಾಲ್ಲೂಕಿನ ವಟ್ಲಹಳ್ಳಿ ಗ್ರಾಮಗಳ ನಡುವೆ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯ ಸ್ಥಳಕ್ಕೆ ಬಿ.ಪಿ. ಹರೀಶ್ ಅವರು ಮಾಧ್ಯಮದವರನ್ನು ಕರೆದುಕೊಂಡು ಹೋಗಿ ತೋರಿಸಿದ್ದರ ಹಿನ್ನೆಲೆಯಲ್ಲಿ ಈ ಬೆದರಿಕೆ ಬಂದಿದೆ ಎಂದು ಹೇಳಿದರು.
ಹರೀಶ್ ಅವರು ಇಂದು ಬೆಳಿಗ್ಗೆ ವಾಯುವಿಹಾರ ಮುಗಿಸಿ ಸಿ.ಜಿ.ಆಸ್ಪತ್ರೆಯ ಎದುರಿನ ಕಾಫಿ ಬಾರ್ ಎದುರು ನಿಂತಿದ್ದಾಗ ಮರಳು ಗಣಿಗಾರಿಕೆ ಮಾಲೀಕರ ಸಹೋದರನೊಬ್ಬ ಧಮ್ಕಿ ಹಾಕಿದ್ದಾನೆ ಎಂದರು.
ಕಾನೂನುಬಾಹಿರವಾಗಿ ಮರಳು ಗಣಿಗಾರಿಕೆ ಮಾಡುವವರು ಎಂತಹ ದುಷ್ಕೃತ್ಯವನ್ನಾದರೂ ಎಸಗಬಲ್ಲರು ಎಂಬುದಕ್ಕೆ ಹಲವು ಉದಾಹರಣೆಗಳು ಇವೆ. ಆದ್ದರಿಂದ ಧಮ್ಕಿ ಹಾಕಿದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ನವರು ಸಂವಿಧಾನದ ಹೆಸರೇಳಿ ಕೊಂಡು ಹೊಟ್ಟೆಪಾಡಿನ ರಾಜಕಾರಣ ಮಾಡುತ್ತಿ ದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಂತಹ ಪ್ರಕರಣಗಳು ಎಗ್ಗಿಲ್ಲದೇ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜಿಲ್ಲಾಡಳಿತ ಇದಕ್ಕೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ್ ಕಡ್ಲೇಬಾಳು, ಐರಣಿ ಅಣ್ಣೇಶ್, ಅನಿಲ್ ಕುಮಾರ್ ನಾಯಕ್, ರಾಜನಹಳ್ಳಿ ಶಿವಕುಮಾರ್, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ, ಎಚ್.ಎನ್. ಗುರುನಾಥ್, ಶ್ರೀನಿವಾಸ ದಾಸಕರಿಯಪ್ಪ, ಆರ್.ಎಲ್. ಶಿವಪ್ರಕಾಶ್, ಕುಂದುವಾಡ ಪ್ರಕಾಶ್, ಕುಂದುವಾಡ ಹನುಮಂತಪ್ಪ, ಕೊಳೇನಹಳ್ಳಿ ಬಿ.ಎಂ. ಸತೀಶ್ ಇದ್ದರು.