ಎಸ್.ವಿ.ಆರ್., ಎಚ್.ಪಿ.ಆರ್ ಜೊತೆ ಮತಯಾಚನೆ, ಹನುಮ ಜಯಂತಿಯಲ್ಲಿ ಭಾಗಿ
ಜಗಳೂರು, ಏ.23- ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ನರೇಂದ್ರ ಮೋದಿ ಜೀ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆ ಯೋಜನೆಗಳ ಭಾಗವಾಗಿ ಪರಿಶಿಷ್ಟ ಪಂಗಡದ ಜನರೇ ಹೆಚ್ಚಾಗಿರುವ ಜಗಳೂರು ತಾಲೂಕಿನಲ್ಲಿ ಏಕ ಲವ್ಯ ಮಾದರಿ ವಸತಿ ಶಾಲೆ ನಿರ್ಮಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತಿಳಿಸಿದರು.
ಜಗಳೂರು ತಾಲ್ಲೂಕಿನ ಹಾಲೇಕಲ್ಲು, ಬಿಳಿಚೋಡು, ಗುತ್ತಿದುರ್ಗ ಗ್ರಾಮದಲ್ಲಿ ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರಪ್ಪ, ಎಚ್.ಪಿ.ರಾಜೇಶ್ ಜೊತೆಯಲ್ಲಿ ಮತಯಾಚಿಸಿ ಅವರು ಮಾತನಾಡಿದರು.
ಸಂಸದ ಜಿ.ಎಂ.ಸಿದ್ದೇಶ್ವರ ಅವರು ಜಗಳೂರು ತಾಲೂಕಿಗೆ ಏಕಲವ್ಯ ಮಾದರಿ ವಸತಿ ಶಾಲೆ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ. ನಾನು ಸಂಸದಳಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಪ್ರಥಮ ಆದ್ಯತೆ ಮೇರೆಗೆ ಏಕಲವ್ಯ ಶಾಲೆ ನಿರ್ಮಾಣಕ್ಕೆ ಒತ್ತು ನೀಡುತ್ತೇನೆ ಎಂದರು.
ಈಗಾಗಲೇ ದೇಶಾದ್ಯಂತ 467 ಏಕಲವ್ಯ ಮಾದರಿ ವಸತಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಈ ಶಾಲೆಗಳ ಸಂಖ್ಯೆಯನ್ನು 1000 ಕ್ಕೆ ಏರಿಸುವ ಸಂಕಲ್ಪವನ್ನು ಮೋದಿ ಜೀ ಸರ್ಕಾರ ಮಾಡಿದೆ. ಆ ಸಾವಿರದಲ್ಲಿ ಜಗಳೂರು ತಾಲೂಕಿನ 1 ಶಾಲೆಯೂ ಇದೆ. ಅದಕ್ಕಾಗಿ ಈಗಾಗಲೇ ಮಾಗಡಿ ಬಳಿ 10 ಎಕರೆ ಜಮೀನು ಗುರುತಿಸಲಾಗಿದೆ. ಇಲ್ಲಿ ಏಕಲವ್ಯ ಮಾದರಿ ಶಾಲೆ ಪ್ರಾರಂಭವಾದರೆ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬಹುದು. ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದು ನನ್ನ ಸಂಕಲ್ಪ ಎಂದು ತಿಳಿಸಿದರು.
ಮಾಜಿ ಶಾಸಕ ಎಸ್.ವಿ.ರಾಚಂದ್ರಪ್ಪ ಮಾತನಾಡಿ, ಜಗಳೂರು ಅತ್ಯಂತ ಹಿಂದುಳಿದ ತಾಲ್ಲೂಕಾಗಿದ್ದು, ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಿದ್ದೇಶ್ವರ ಮತ್ತು ಯಡಿಯೂರಪ್ಪ ಅವರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ಕೊಟ್ಟರು. ಅವರ ದೂರದೃಷ್ಟಿ ಚಿಂತನೆ ಪರಿಣಾಮ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಈಗ ಸಿದ್ದೇಶ್ವರ ಧರ್ಮಪತ್ನಿ ಗಾಯತ್ರಿ ಸಿದ್ದೇಶ್ವರ ಅವರು ಸ್ಪರ್ಧಿಸಿದ್ದಾರೆ. ಅವರನ್ನು ಗೆಲ್ಲಿಸಿ, ದೆಹಲಿಗೆ ಕಳುಹಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಇಲ್ಲಿ ಗೆದ್ದು ದೆಹಲಿಗೆ ಹೋದರೆ, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗೋದು ಖಚಿತ. ಎಲ್ಲ ಕಾರ್ಯಕರ್ತರು ಇನ್ನೂ 15 ದಿನ ವಿರಮಿಸದೇ ಮನೆ – ಮನೆಗೂ ಹೋಗಿ ಗಾಯತ್ರಿ ಸಿದ್ದೇಶ್ವರ ಅವರ ಪರ ಮತಯಾಚಿಸಬೇಕು ಎಂದು ಕರೆ ನೀಡಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೆ. ಅಲ್ಲಿನ ವ್ಯವಸ್ಥೆ, ಅರಾಜಕತೆ ನೋಡಿ, ಜಿ.ಎಂ.ಸಿದ್ದೇಶ್ವರ ಅವರ ಅಭಿವೃದ್ಧಿ ಕೆಲಸಗಳು, ಎಲ್ಲರನ್ನೂ ತಮ್ಮವರು ಎನ್ನುವಂತೆ ಅಪ್ಪಿಕೊಳ್ಳುವ ಮನಸ್ಸು ನೋಡಿ ಬಿಜೆಪಿಗೆ ಬಂದಿದ್ದೇನೆ. ನಾನು-ರಾಮಣ್ಣ ಇಬ್ಬರೂ ಒಂದಾಗಿ ಗಾಯತ್ರಿ ಸಿದ್ದೇಶ್ವರ ಅವರನ್ನು ಗೆಲ್ಲಿಸಲು ಪಣ ತೊಟ್ಟಿದ್ದೇವೆ. ಕಾರ್ಯಕರ್ತರು ಕೂಡ ಇಲ್ಲಿ ಗಾಯತ್ರಿ ಸಿದ್ದೇಶ್ವರ ಅವರನ್ನು ಗೆಲ್ಲಿಸುವ ಮೂಲಕ ದೇಶದಲ್ಲಿ ಮತ್ತೊಮ್ಮೆ ಮೋದಿ ಯುಗಕ್ಕೆ ಹೊಸ ಭಾಷ್ಯ ಬರೆಯಬೇಕು ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಕಲ್ಲೇರುದ್ರೇಶ್ ಮಾತನಾಡಿ, ದಾವಣಗೆರೆಯಲ್ಲಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗಾಯತ್ರಿ ಸಿದ್ದೇಶ್ವರ ಅವರು ಗೆಲುವು ಸಾಧಿಸಿ, ಇತಿಹಾಸ ಬರೆಯುವುದು ಖಚಿತ ಎಂದರು.
ಬಿಜೆಪಿ ಯುವ ಮುಖಂಡರಾದ ಜಿ.ಎಸ್.ಅನಿತ್ ಕುಮಾರ್, ಪಲ್ಲಾಗಟ್ಟಿ ಮಹೇಶ್, ಇಂದಿರಾ ರಾಮಚಂದ್ರ, ರೂಪ, ವಿಜಯಲಕ್ಷ್ಮಿ, ಮಂಡಲದ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಬೂತ್ ಮಟ್ಟದ ಅಧ್ಯಕ್ಷರು, ಗ್ರಾಮದ ಬಿಜೆಪಿ ಮುಖಂಡರು ಸೇರಿದಂತೆ ಜಗಳೂರು ವಿಧಾನ ಸಭಾ ಕ್ಷೇತ್ರದ ಮುಖಂಡರು ಇದ್ದರು.