ಹರಿಹರ, ಏ, 19 – ನಗರ ಸೇರಿದಂತೆ ತಾಲ್ಲೂಕಿನ ಗುತ್ತೂರು, ಕೊಂಡಜ್ಜಿ, ಗಂಗನಹರಸಿ, ಸಾರಥಿ, ಹಳೆ ಹರ್ಲಾಪುರ, ಪಾಮೇನಹಳ್ಳಿ, ಕುರಬರಹಳ್ಳಿ, ಕರಲಹಳ್ಳಿ, ಚಿಕ್ಕಬಿದರಿ, ಬಸಾಪುರ, ಅಮರಾವತಿ, ದೊಗ್ಗಳ್ಳಿ ಹಲಸಬಾಳು, ರಾಜನಹಳ್ಳಿ, ಬಿಳಸನೂರು, ನಂದಿಗಾವಿ, ಹನಗವಾಡಿ, ಬೆಳ್ಳೂಡಿ, ರಾಮತೀರ್ಥ, ನಾಗೇನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮುಂಗಾರು ಮಳೆ ಗಾಳಿ ರಭಸವು ಹೆಚ್ಚಿನ ಪ್ರಮಾಣದಲ್ಲಿ ಆಗಿದ್ದರಿಂದ, ಕೊಂಡಜ್ಜಿ, ಗಂಗನಹರಸಿ, ಬಸಾಪುರ ಅಮರಾವತಿ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಮತ್ತು ಅನೇಕ ಮರಗಳು ನೆಲಕ್ಕೆ ಉರುಳಿ ಬಿದ್ದಿದ್ದು , ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು.
ತಡ ರಾತ್ರಿಯ ಸಮಯದಲ್ಲಿ ಬೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿಕೊಟ್ಟು ವಿದ್ಯುತ್ ಕಂಬವನ್ನು ಸರಿ ಪಡಿಸಿದರು. ಆದರೆ ರಾತ್ರಿ ವೇಳೆ ಆಗಿದ್ದರಿಂದ ಕೊಂಡಜ್ಜಿ ಹಾಗೂ ಕೆಲವು ಹಳ್ಳಿಗಳಲ್ಲಿ ಮಾತ್ರ ವಿದ್ಯುತ್ ಕಂಬವನ್ನು ದುರಸ್ತಿ ಪಡಿಸಿದರು.
ನಗರದಲ್ಲಿ ಕೆಲವೊಂದು ಬಡಾವಣೆಯಲ್ಲಿ ಮಳೆಯ ಪ್ರಮಾಣವು ಹೆಚ್ಚಾಗಿದ್ದರಿಂದ ವಿದ್ಯುತ್ ಪೂರೈಕೆ ಕಡಿತ ಮಾಡಿ ಮಳೆಯ ಪ್ರಮಾಣ ಕಡಿಮೆ ಆದ ನಂತರ ವಿದ್ಯುತ್ ಸಂಪರ್ಕವನ್ನು ಎಂದಿನಂತೆ ಇರುವಂತೆ ಬೆಸ್ಕಾಂ ಸಿಬ್ಬಂದಿಗಳು ಕಾರ್ಯವನ್ನು ಮಾಡುವಲ್ಲಿ ನಿರತರಾದರು.