ಚನ್ನಗಿರಿ ವಿಧಾನಸಭಾ ವ್ಯಾಪ್ತಿಯಲ್ಲಿನ ಪ್ರಚಾರ ಕಾರ್ಯದಲ್ಲಿ ಡಾ. ಪ್ರಭಾ ಮಲ್ಲಿಕಾರ್ಜು
ಚನ್ನಗಿರಿ, ಏ 18 – ಚನ್ನಗಿರಿ ತಾಲ್ಲೂಕಿನ ಕೆರೆಗಳು ಸೇರಿದಂತೆ ಒಟ್ಟು 124 ಕೆರೆಗಳನ್ನು ತುಂಬಿಸುವ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ|| ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ನಿನ್ನೆ ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮರಡಿ ಗ್ರಾಮದಿಂದ ಆರಂಭವಾದ ಪ್ರಚಾರ ಕಾರ್ಯಕ್ರಮವು ಉಪ್ಪನಾಯ್ಕನಹಳ್ಳಿ, ತಣಿಗೆರೆ, ಭೀಮನೆರೆ, ಮಂಗೇನಹಳ್ಳಿ, ಮೆದಿಕೆರೆ, ಎಕ್ಕೆಗೊಂದಿ, ಕೊಮ್ಮಾರನಹಳ್ಳಿ, ತೋಪೇನಹಳ್ಳಿ, ಕಲ್ಲೇನಹಳ್ಳಿ, ಸಿದ್ದನಮಠ, ಕಸ್ತೂರಿ ಬಾ ನಗರ, ದೊಡ್ಡಬ್ಬಿಗೆರೆ, ಚಿಕ್ಕಬ್ಬಿಗೆರೆ, ಎಸ್.ಬಿ.ಆರ್. ಕಾಲೋನಿ, ನಾಗೇನಹಳ್ಳಿ, ಗೆದ್ದಲಹಟ್ಟಿ, ಸೋಮನಾಳು, ಬೆಳ್ಳಿಗನೂಡು, ಗೊಲ್ಲರಹಳ್ಳಿ, ಚಿಕ್ಕಬೆನ್ನೂರು, ಚನ್ನಾಪುರ, ಚಿಕ್ಕುಡ, ಗೊಲ್ಲರಹಟ್ಟಿ, ಕೊಂಡದಹಳ್ಳಿ ಮತ್ತು ನಿಂಬಾಪುರ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
2013- 2018ರ ಅವಧಿಯಲ್ಲಿ ಶಾಸಕರಾಗಿದ್ದ ವಡ್ನಾಳ್ ರಾಜಣ್ಣನವರ ಕನಸಿನ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಗೆ 2017ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ರೂ.448 ಕೋಟಿ ಅನುದಾನ ನೀಡಿ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಇಂದಿಗೂ ಸಹ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಕಾಮಗಾರಿಯನ್ನು ಇಲ್ಲಿನ ಶಾಸಕರಾದ ಶಿವಗಂಗಾ ಬಸವರಾಜ್ ಅವರ ಸಹಕಾರದಿಂದ ಶೀಘ್ರ ಮುಕ್ತಾಯಗೊಳಿಸಿ ವಡ್ನಾಳ್ ರಾಜಣ್ಣನವರ ಜೊತೆಗೂಡಿ ಸಾರ್ವಜನಿಕರಿಗೆ ಅರ್ಪಿಸಲಾಗುವುದು ಎಂದರು.
ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ದಾವಣಗೆರೆ ಜಿಲ್ಲೆ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕನ್ನು ಸಂಪೂರ್ಣ ನೀರಾವರಿ ಪ್ರದೇಶವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಪಡುವುದಾಗಿ ತಿಳಿಸಿದರು.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಭರವಸೆ ನೀಡಿದಂತೆ ಐದು ಗ್ಯಾರಂಟಿಗಳನ್ನು ನೀಡುವ ಮೂಲಕ `ಕಾಂಗ್ರೆಸ್ ಸರ್ಕಾರ, ಗ್ಯಾರಂಟಿ ಸರ್ಕಾರ’ ಆಗಿದ್ದು, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ರಾಜ್ಯ ಸರ್ಕಾರದಂತೆ ಕೇಂದ್ರದಲ್ಲೂ ಸಹ 25 ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲಿದ್ದು, ಎಲ್ಲಾ ವರ್ಗದವರಿಗೂ ಈ ಗ್ಯಾರಂಟಿ ಯೋಜನೆ ಅನ್ವಯವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವಡ್ನಾಳ್ ರಾಜಣ್ಣ, ಶಾಸಕ ಶಿವಗಂಗಾ ಬಸವರಾಜ್, ಬ್ಲಾಕ್ ಅಧ್ಯಕ್ಷ ಜಬಿವುಲ್ಲಾ, ಶ್ರೀನಿವಾಸ್, ಪಕ್ಷದ ಮುಖಂಡರಾದ ಹೊದಿಗೆರೆ ರಮೇಶ್, ವೀರೇಶ್ ನಾಯ್ಕ, ವಡ್ನಾಳ್ ಜಗದೀಶ್, ಶಿವಗಂಗಾ ಶ್ರೀನಿವಾಸ್ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ನ್