ಜಿಲ್ಲಾದ್ಯಂತ ಶ್ರೀರಾಮ ನವಮಿ ಸಂಭ್ರಮ, ಪಾನಕ, ಕೋಸಂಬರಿ ವಿತರಣೆ
ದಾವಣಗೆರೆ, ಏ.17- ಜಿಲ್ಲೆಯ ವಿವಿಧ ಶ್ರೀರಾಮ ಮಂದಿರಗಳಲ್ಲಿ ಬುಧವಾರ ಶ್ರೀರಾಮ ನವಮಿಯನ್ನು ಸಡಗರ, ಸಂಭ್ರಮ ದಿಂದ ಆಚರಿಸಲಾಯಿತು. ರಾಮನವಮಿ ಪ್ರಯುಕ್ತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ-ಹೋಮ-ಹವನ, ತೊಟ್ಟಿಲೋತ್ಸವ, ಭಜನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ದೇವಸ್ಥಾನದಲ್ಲಿ ರಾಮಜನ್ಮೋತ್ಸವ ನಿಮಿತ್ಯ ಪಾರಾಯಣ, ಪುರಾಣ, ಕೀರ್ತನೆ, ವಾಹನ ಸೇವೆ ಮುಂತಾದ ಕಾರ್ಯಕ್ರಮಗಳು ಜರುಗಿದವು. ಭಕ್ತರು ದೇವಾಲಯಗಳಿಗೆ ಆಗಮಿಸಿ ಶ್ರೀರಾಮನ ದರ್ಶನ ಮಾಡಿದರು.
ಶ್ರೀರಾಮನ ಭಕ್ತ ಆಂಜನೇಯನ ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನಡೆದವು. ಪಾನಕ, ಕೋಸಂಬರಿ ವಿತರಿಸಲಾಗುತ್ತಿತ್ತು. ದೇವಸ್ಥಾನಗಳಲ್ಲಿ ಅಷ್ಟೇ ಅಲ್ಲದೆ, ವಿವಿಧ ಸಂಘ ಸಂಸ್ಥೆಗಳಿಂದ ನಗರದ ವಿವಿಧ ಪ್ರಮುಖ ರಸ್ತೆ, ವೃತ್ತಗಳಲ್ಲೂ ಪಾನಕ, ಕೋಸಂಬರಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ದಾವಣಗೆರೆ ಜಯದೇವ ವೃತ್ತದ ಶ್ರೀ ಶಂಕರಮಠದ ಆವರಣದಲ್ಲಿರುವ ಶ್ರೀ ರಾಮ ದೇವಸ್ಥಾನದಲ್ಲಿ ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣನ ಮೂರ್ತಿಗಳ ಅಲಂಕಾರ ಮಾಡಲಾಗಿತ್ತು. ಸನಿಹದಲ್ಲೇ ಶ್ರೀರಾಮನ ಮೂರ್ತಿಗೆ ಅಭಿಷೇಕ ಮಾಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು.
ದೇವಸ್ಥಾನದ ಮುಂಭಾಗ ಪಾನಕ, ಕೋಸಂಬರಿ ವಿತರಿಸಲಾಯಿತು. ಪಿ.ಜೆ. ಬಡಾವಣೆಯ ಖಮಿತ್ಕರ್ ಶ್ರೀರಾಮ ದೇವಸ್ಥಾನದಲ್ಲಿ ತೊಟ್ಟಿಲೋತ್ಸವದ ದೃಶ್ಯ (ಬಲಚಿತ್ರ)
ನಗರದ ಪಿ.ಜೆ. ಬಡಾವಣೆಯ ಶ್ರೀರಾಮ ಮಂದಿರ, ಮಂಡಿಪೇಟೆಯ ಕೋದಂಡರಾಮ ದೇವಸ್ಥಾನ, ಪಿ.ಬಿ.ರಸ್ತೆಯ ಗೀತಾ ಮಂದಿರದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆಗಳು ನಡೆದವು.
ವಿವಿಧ ಗ್ರಾಮಗಳಲ್ಲಿ ಆಂಜನೇಯ ಸ್ವಾಮಿ ರಥೋತ್ಸವ ಹಾಗೂ ಉಚ್ಛಾಯ ಎಳೆದು ರಾಮನವಮಿ ಆಚರಿಸಿದರು.
ಹಿಂದೂ ಪುರಾಣಗಳಲ್ಲಿ ಅತ್ಯಂತ ಶ್ರೇಷ್ಠ ವ್ಯಕ್ತಿಯೆಂದೇ ಪರಿಗಣಿಸಲ್ಪಟ್ಟಿರುವ ಭಗವಾನ್ ಶ್ರೀ ರಾಮನ ರಾಮನು ನವಮಿಯಂದು ಜನ್ಮ ತಾಳಿದ್ದನು. ಹಿಂದೂ ಕ್ಯಾಲೆಂಡರ್ನಲ್ಲಿ ಸಾಂಪ್ರದಾಯಿಕವಾಗಿ ಚೈತ್ರ ಮಾಸದ ಒಂಬತ್ತನೇ ದಿನದಂದು ರಾಮ ನವಮಿಯನ್ನು ಆಚರಿಸಲಾಗುತ್ತದೆ. ಶ್ರೀರಾಮನು ವಿಷ್ಣುವಿನ ಏಳನೇ ಅವತಾರ ವೆಂದು ನಂಬಲಾಗುತ್ತದೆ. ಸದಾಚಾರ ಮತ್ತು ಸದ್ಗುಣಗಳ ಪ್ರತಿಪಾದಕನೆಂದು ರಾಮನನ್ನು ಕರೆಯಲಾಗುತ್ತದೆ.
ಅನೇಕ ಶತಮಾನಗಳಿಂದ ರಾಮ ನವಮಿ ಯನ್ನು ಅತ್ಯಂತ ವೈಭವವಾಗಿ ಆಚರಿಸಲಾಗುತ್ತದೆ.