ಕೊಮಾರನಹಳ್ಳಿ : ರುದ್ರಪಾರಾಯಣದ ಧರ್ಮಸಭೆಯಲ್ಲಿ ಬ್ರಹ್ಮಾನಂದ ತೀರ್ಥ ಭಿಕ್ಷು
ಮಲೇಬೆನ್ನೂರು, ಏ,15- ದೇಶದಲ್ಲಿ ಚುನಾವಣೆ ನಡೆಯುತ್ತಿದ್ದು, ಧರ್ಮ, ರಾಷ್ಟ್ರ ರಕ್ಷಣೆ, ಜನಪರ ಕಾಳಜಿ ಇರುವಂತಹ ಯೋಗ್ಯ ಅಭ್ಯರ್ಥಿಗೆ ಮತ ಹಾಕುವಂತೆ ಶಿವಮೊಗ್ಗದ ಸತ್ ಉಪಾಸಿ ದಿವ್ಯಾಶ್ರಮದ ಬ್ರಹ್ಮಾನಂದ ತೀರ್ಥ ಭಿಕ್ಷು ಜನತೆಗೆ ಸಲಹೆ ನೀಡಿದರು.
ಅವರು, ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮೀರಂಗನಾಥ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಅತ್ಯಧಿಕ ಕೋಟಿ ರುದ್ರಯಾಗ ಧರ್ಮಸಭೆಯಲ್ಲಿ ಮಾತನಾಡಿದರು.
ಚುನಾವಣೆ ವೇಳೆ ಮತದಾನ ಮಾಡುವ ಮುನ್ನ ಜಾಗ್ರತೆ ವಹಿಸಿ.ಇಲ್ಲವಾದರೆ ತೊಂದರೆ ಖಚಿತ ಎಂದು ಮತದಾನ ಕುರಿತು ಜಾಗೃತಿ ಮೂಡಿಸಿದರು.
ಎಲ್ಲೆಡೆ ಜನ ಪಾಶ್ಚಾತ್ಯ ಸಂಸ್ಕೃತಿಗೆ ಮನಸೋಲುತ್ತಿದ್ದು ಸನಾತನ ಧರ್ಮಕ್ಕೆ ಹಿನ್ನಡೆ ಆಗುತ್ತಿದೆ. ದೇಸಿಯ ಸಂಸ್ಕೃತಿ, ಉಳಿಸಲು ಮೊದಲು ಮಕ್ಕಳಿಗೆ ವಸ್ತ್ರಸಂಹಿತೆ ಅಗತ್ಯ. ಮಠ ದೇವಾಲಯಕ್ಕೆ ಭೇಟಿ, ಗುರುದರ್ಶನ, ಆಶೀರ್ವಾದ ದಾನ, ಧರ್ಮ, ಸತ್ಸಂಗ, ಉಪನ್ಯಾಸ, ಆಧ್ಯಾತ್ಮ ಚಿಂತನೆಗಳ ಮೂಲಕ ಭಾರತೀಯ ಸನಾತನ ಧರ್ಮ ರಕ್ಷಿಸಬೇಕು. ರುದ್ರ ಪಾರಾಯಣ, ಹೋಮದಿಂದ ಲೋಕಕಲ್ಯಾಣ ಖಚಿತ ಎಂದರು.
ಹಿರಿಯೂರಿನ ದತ್ತಾಶ್ರಮದ ಸುಭೋದಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ದುಷ್ಟ ಸಂಹಾರದ ಮೂಲಕ ಧರ್ಮ ರಕ್ಷಣೆಯ ಕರ್ಮ ಭೂಮಿ ಭಾರತ ಎಂದರು. ದುಷ್ಟರಿಂದ, ಕೆಟ್ಟ ಕೆಲಸದಿಂದ ದೂರವಿದ್ದು ಕಾಯಕ ನಿಷ್ಠರಾಗಿ. ಮನಸ್ಸು ಹಿಡಿತದಲ್ಲಿದಡಲು ಉಪನ್ಯಾಸ, ಧರ್ಮಕಾರ್ಯಗಳಲ್ಲಿ ಪಾಲ್ಗೊಳ್ಳಿ ಎಂದರು.
ಚಲನಚಿತ್ರ ನಟ ಶ್ರೀಧರ್ ಮಾತನಾಡಿ, ಮನುಷ್ಯ ಜೀವನ ಸಾರ್ಥಕ ಪಡಿಸಿಕೊಳ್ಳಲು ಧರ್ಮ ಗುರುವಿನ ಮಾರ್ಗದರ್ಶನ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಹೊಸದುರ್ಗದ ಸದ್ಗುರು ಸೇವಾಶ್ರಮದ ಕಾಂತಾನಂದ ಸರಸ್ವತಿ ಧರ್ಮಸಭೆ ಹಾಗೂ ರುದ್ರ ಪಾರಾಯಣದ ನೇತೃತ್ವ ವಹಿಸಿದ್ದರು. ಯಾಗಶಾಲೆಯಲ್ಲಿ ರುದ್ರಹೋಮ ಜರುಗಿತು.