ದಾವಣಗೆರೆ, ಏ. 11 – ಪವಿತ್ರ ರಂಜಾನ್ ಹಬ್ಬವು ನಗರಾದ್ಯಂತ ಮುಸ್ಲಿಂ ಬಾಂಧವರು ಇಂದು ಸಡಗರ-ಸಂಭ್ರಮದಿಂದ ಆಚರಿಸಿದರು.
ಈದ್-ಉಲ್-ಫಿತರ್ ನಮಾಜ್ ಬೆಳಿಗ್ಗೆ ಪಿ.ಬಿ. ರಸ್ತೆ ಹಳೇ ಈದ್ಗಾ, ರಜಾವುಲ್ ಮುಸ್ತಾಫ ನಗರದಲ್ಲಿರುವ ಹೊಸ ಈದ್ಗಾ, ಎಸ್.ಓ.ಜಿ. ಕಾಲೋನಿಯಲ್ಲಿರುವ ಈದ್ಗಾಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿ ಒಬ್ಬರಿಗೊಬ್ಬರು ಆಲಂಗಿಸಿ, ಹಸ್ತಲಾಘವ ಮಾಡುವುದರ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಕಳೆದ ಒಂದು ತಿಂಗಳಿನಿಂದ ಉಪವಾಸ (ರೋಜಾ) ಆಚರಿಸಿ ಚಂದ್ರದರ್ಶನ ಮಾಡುವುದರ ಮೂಲಕ ಹಬ್ಬ ಆಚರಿಸಿದ ಮುಸ್ಲಿಂ ಬಾಂಧವರು ಜಕಾತ್, ಫಿತ್ರಾದ ಹಣವನ್ನು ಬಡವರಿಗೆ, ನಿರ್ಗತಿಕರಿಗೆ ದಾನ ಮಾಡಿದರು.
ಹೊಸ ಬಟ್ಟೆಯನ್ನು ಧರಿಸಿಕೊಂಡು ತಲೆಗೆ ಟೋಪಿ, ಹಾಕಿಕೊಂಡು, ತಮ್ಮ ತಮ್ಮ ಮಕ್ಕಳೊಂದಿಗೆ ನಗರದ ವಿವಿಧ ಬಡಾವಣೆಗಳಿಂದ ಈದ್ಗಾದತ್ತ ಧಾವಿಸುತ್ತಿದ್ದ ಮುಸ್ಲಿಂ ಬಾಂಧವರು `ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್’ ಎಂಬ ಶ್ಲೋಕಗಳನ್ನು ಪಠಿಸುತ್ತಾ ಹೆಜ್ಜೆ ಹಾಕುತ್ತಿದ್ದ ದೃಶ್ಯ ನಗರದಲ್ಲೆಡೆ ಸಾಮಾನ್ಯವಾಗಿತ್ತು.
ತಂಜೀಮುಲ್-ಮುಸ್ಲಿಂಮೀನ್ ಫಂಡ್ ಅಸೋಸಿಯೇಷನ್ ಸಹಯೋಗ ದಲ್ಲಿ ಹಮ್ಮಿಕೊಂಡಿದ್ದ ಈದ್ ನಮಾಜ್ ಬೋಧಿಸಿದ ಮದೀನಾ ಮಸೀದಿಯ ಪೇಶ್ ಇಮಾಂ ಮೌಲಾನಾ ಸೈಯದ್ ನಾಸೀರ್ ಆಹ್ಮದ್ ಮಿಸ್ಬಾಯಿ ತಮ್ಮ ಸಂದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗಿದ್ದಾರೆ ಎ೦ದು ಆತಂಕ ವ್ಯಕ್ತಪಡಿಸಿ, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಮುಂದಾಗಬೇಕು. ಧಾರ್ಮಿಕ ಶಿಕ್ಷಣದ ಜೊತೆಗೆ ಸಾಮಾಜಿಕ ಶಿಕ್ಷಣವನ್ನೂ ಸಹ ಪಡೆಯಬೇಕೆಂದು ಹೇಳಿದರು.
ವರುಣನ ಕೃಪೆಗಾಗಿ ವಿಶೇಷ ದುವಾ ಮಾಡಿದ ಮೌಲಾನಾ ರಂಜಾನ್ ಹಬ್ಬವು ಸಮಸ್ತ ಬಾಂಧವರಿಗೆ ಸುಖ, ಶಾಂತಿ, ಸಮೃದ್ಧಿ, ಸಹಬಾಳ್ವೆ ನೀಡಲಿ ವಿಶ್ವಾದ್ಯಂತ ಶಾಂತಿ ನೆಲೆಸಲಿ ಎಂದು ಆಶೀರ್ವಚನ ನೀಡಿ ರಂಜಾನ್ ಹಬ್ಬದ ಶುಭಾಶಯ ಕೋರಿದರು.
ತಂಜೀಮ್ ಅಧ್ಯಕ್ಷ ದಾದಾಪೀರ್, ಉಪಾಧ್ಯಕ್ಷ ಎಸ್.ಕೆ. ಅಮ್ಜದ್ ಉಲ್ಲಾ, ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಇದ್ದರು. ನಗರದ ಮಸೀದಿಗಳಲ್ಲಿಯೂ ಸಹ ಹಬ್ಬದ ಪ್ರಾರ್ಥನೆ ಸಲ್ಲಿಸಲಾಯಿತು.