ದಾವಣಗೆರೆ, ಏ.2- ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಬಗ್ಗೆ ನಾನು ನೀಡಿರುವ ಹೇಳಿಕೆ ಯನ್ನು ನನಗಾಗದ ವರು ದ್ವೇಷದಿಂದ ತಿರುಚಿ ಮಾಧ್ಯಮ ದಲ್ಲಿ ಹರಿಬಿಟ್ಟಿದ್ದಾರೆ. ಇದನ್ನೇ ಆಧಾರವಾಗಿಟ್ಟು ಕೊಂಡು ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ತಮ್ಮ ಟ್ವೀಟ್ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ನಾನು ಅಂತಹ ಹೇಳಿಕೆ ನೀಡಿಲ್ಲ ಎಂದು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಬಗ್ಗೆ ಎಸ್ಸೆಸ್ ನೀಡಿದ್ದ ಹೇಳಿಕೆ ಕುರಿತು ಬ್ಯಾಡ್ಮಿಂಟನ್ ಮಾಜಿ ಆಟಗಾರ್ತಿ ಸೈನಾ ನೆಹ್ವಾಲ್ ತಮ್ಮ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿರುವುದಕ್ಕೆ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಕುರಿತು ಜಿಲ್ಲಾ ಚುನಾವಣಾಧಿಕಾರಿಗಳ ಸೂಚನೆಯಂತೆ 24 ಗಂಟೆಯೊಳಗೆ ಸಮಜಾಯಿಷಿ ನೀಡುವಂತೆ ಸಹಾಯಕ ಚುನಾವಣಾಧಿಕಾರಿಗಳು ಶಿವಶಂಕರಪ್ಪ ಅವರಿಗೆ ಮಾ.31ರಂದು ನೋಟೀಸ್ ಕಳುಹಿಸಿದ್ದರು.
ನೋಟಿಸ್ಗೆ ಉತ್ತರಿಸಿರುವ ಶಿವಶಂಕರಪ್ಪ ಅವರು, `ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತರಲ್ಲ ಎಂಬುದನ್ನು ನಮ್ಮ ಪಕ್ಷದ ದಿ.ಇಂದಿರಾಗಾಂದಿಯವರು ಸಾಬೀತು ಪಡಿಸಿದ್ದು, ಅದೇ ರೀತಿ ದಾವಣಗೆರೆ ಲೋಕಸಭಾ ಕ್ಷೇತಗಳಲ್ಲೂ ಸಹ ಮಹಿಳೆಯರೇ ಸ್ಪರ್ಧಿಸಿದ್ದು, ನಿಮ್ಮ ಮತವನ್ನು ನಿಮ್ಮ ಸಮಸ್ಯೆಯನ್ನು ದೆಹಲಿಯವರಿಗೆ ತಲುಪಿಸುವವರಿಗೆ ನೀಡಿ ಎಂದು ಮಾತ್ರ ನಾನು ಹೇಳಿಕೆ ನೀಡಿದ್ದೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ.