ಮಹಿಳಾ ದಿನಾಚರಣೆ ಮಾರ್ಚ್‌ ತಿಂಗಳಿಗೆ ಸೀಮಿತವಾಗದಿರಲಿ

ಮಹಿಳಾ ದಿನಾಚರಣೆ ಮಾರ್ಚ್‌ ತಿಂಗಳಿಗೆ ಸೀಮಿತವಾಗದಿರಲಿ

ಕಡಾರನಾಯ್ಕನಹಳ್ಳಿಯಲ್ಲಿನ ಕಾರ್ಯಕ್ರಮದಲ್ಲಿ ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ

ಮಲೇಬೆನ್ನೂರು, ಏ.2- ಎಲ್ಲಿ ಸ್ತ್ರೀಯರಿಗೆ ಪೂಜ್ಯ ಸ್ಥಾನವಿದೆಯೋ ಅಲ್ಲಿ ದೇವತೆಗಳು ನೆಲೆಸುತ್ತಾರೆ. ಮಹಿಳೆ ವಾತ್ಸಲ್ಯಮಯಿ, ತ್ಯಾಗಮಯಿ. ತನ್ನೆಲ್ಲಾ ನೋವುಗಳನ್ನು ನುಂಗಿ ಕುಟುಂಬದ ನಲಿವಿಗೆ ಬದುಕಿದವಳು. ನೊಂದ ಎಲ್ಲಾ ಜೀವ ನನ್ನದೆಂಬ ಭಾವ ಅವಳದು ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕಡಾರನಾಯ್ಕನಹಳ್ಳಿ ಗ್ರಾಮದಲ್ಲಿ ಮಹಾತಪಸ್ವಿ ಸೇವಾ ಪ್ರತಿಷ್ಠಾನದಿಂದ ಈಚೆಗೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ಸಾಧಕರನ್ನು ಗೌರವಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದುಷ್ಟರ ಸಂಹಾರಕ್ಕೆ ಮಹಿಳೆ ವಿವಿಧ ಅವತಾರ ತಾಳಿದ್ದನ್ನು ಪುರಾಣಗಳಲ್ಲಿ ಕೇಳಿದ್ದೇವೆ. ಮಹಿಳೆ ಕುಟುಂಬದ ಆಧಾರಸ್ತಂಭ. ಗುರುವಿಗಿಂತ ಮೊದಲ ಸ್ಥಾನ ತಾಯಿಯದು. ಮಹಿಳಾ ದಿನಾಚರಣೆ ಕೇವಲ ಮಾರ್ಚ್ ತಿಂಗಳಿಗೆ ಸೀಮಿತವಾಗಬಾರದು. ನಮ್ಮ ಪ್ರತಿಷ್ಠಾನದಿಂದ 8 ವರ್ಷಗಳಿಂದ 27 ಅಂಗ ಶಾಖೆಗಳ ಮೂಲಕ ಮಹಿಳೆಯರಲ್ಲಿ ಜಾಗೃತಿ, ಗೌರವ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

ಹರಿಹರದ ಮಹಾತಪಸ್ವಿ ಸೇವಾ ಪ್ರತಿಷ್ಠಾನದ ಅವಧೂತ ಕವಿ ಗುರುರಾಜ ಗುರೂಜಿ ಸಾನ್ನಿಧ್ಯ ವಹಿಸಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದಿವ್ಯಾ, ಅಮೃತ, ವೇದಾ, ಶಶಿಕಲಾ, ರಂಗಮ್ಮ, ನಾಗಮ್ಮ, ಸುರೇಖ ರಾಯ್ಕರ್ ಅವರನ್ನು ಸನ್ಮಾನಿಸಲಾಯಿತು.

ಗ್ರಾಮದ ಅನುಸೂಯಮ್ಮ ಅವರಿಗೆ ಪ್ರತಿಷ್ಠಾನದ ವತಿಯಿಂದ `ಸ್ತ್ರೀ ನಿತ್ಯ ಸುಮಂಗಲೆ ಸದಾ ಸರ್ವಮಂಗಲೆ’ ಬಾಗಿನ ನೀಡಲಾಯಿತು. ಮಹಾ ತಪಸ್ವಿ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಕೆ.ಸಿ.ಶಾಂತಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತರೀಕೆರೆ ಎಸ್‌ಜೆಎಂ ಕಾಲೇಜಿನ ಉಪನ್ಯಾಸಕ ರಾದ ಶಿಲ್ಪಕಲಾ ನಾಗರಾಜ್ ವಿಶೇಷ ಉಪನ್ಯಾಸ ನೀಡಿದರು. ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ. ಕೊಟ್ರೇಶ್ ಕಾರ್ಯಕ್ರಮ ನಡೆಸಿಕೊಟ್ಟರು. ದ್ರಾಕ್ಷಾಯಣಿ ಭಂಡಾರಿ ಅವರ ಭರತ ನಾಟ್ಯ ಗಮನ ಸೆಳೆಯಿತು.

ಮಹಾತಪಸ್ವಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಸಿ.ವಿ.ಪಾಟೀಲ್, ವಕೀಲ ಕೆ.ಹೆಚ್.ನಾಗನಗೌಡ, ನೀಲಮ್ಮ, ಸುನೀತಾ, ಷಣ್ಮುಖಪ್ಪ, ಎಂ.ಹೆಚ್. ಸದಾನಂದ, ಹನುಮಕ್ಕ, ಜಿ.ಮಂಜುನಾಥ್, ವಿ.ನಾಗೇಂದ್ರಪ್ಪ, ಜಯಶೀಲ, ಗುರುರಾಜ್, ಗೀತಾ, ಅಂಬುಜಾ, ಶಕುಂತಲಾ ಮತ್ತು ಇತರರು ಭಾಗವಹಿಸಿದ್ದರು.

error: Content is protected !!