ಮಲೇಬೆನ್ನೂರು : ವೃದ್ಧೆಯ ಮಾಸಿಕ ಪಿಂಚಣಿ ಹಣ ಸಿಗುವಂತೆ ಮಾಡಿದ ಉಪ ತಹಶೀಲ್ದಾರ್

ಮಲೇಬೆನ್ನೂರು : ವೃದ್ಧೆಯ ಮಾಸಿಕ ಪಿಂಚಣಿ  ಹಣ ಸಿಗುವಂತೆ ಮಾಡಿದ ಉಪ ತಹಶೀಲ್ದಾರ್

ಮಲೇಬೆನ್ನೂರು, ಏ.1- ಪಟ್ಟಣದ ಪುರಸಭೆ ಕಛೇರಿ ಹತ್ತಿರದಲ್ಲಿ ಸುಮಾರು 75 ರಿಂದ 80 ವರ್ಷ ವಯಸ್ಸಿನ ವೃದ್ಧೆಯು ನಿಶಕ್ತ ಸ್ಥಿತಿಯಲ್ಲಿ ಕುಳಿತುಕೊಂಡು ಬಳಲುತ್ತಿರುವುದನ್ನು ಗಮನಿಸಿದ ಉಪ ತಹಸೀಲ್ದಾರ್ ಆರ್.ರವಿ ಹಾಗೂ ರಾಜಸ್ವ ನಿರೀಕ್ಷಕ ಆನಂದ್ ಮತ್ತು ಗ್ರಾಮ ಸಹಾ ಯಕ ಜೈ ಮಾರುತಿ ಅವರು, ವೃದ್ಧೆಯ ಬಳಿ ಹೋಗಿ ವಿಚಾರಿಸಿದ್ದಾರೆ. ವೃದ್ಧೆಯು ಆದಾಪುರ ಗ್ರಾಮದ ವಾಸಿಯಾಗಿದ್ದು, ಬಿಸಿ ಲಿನ ದಾಹದಿಂದ ನಿತ್ರಾಣ ಸ್ಥಿತಿಯಲ್ಲಿ ಕಂಡಾಗ ತಕ್ಷಣ ವೃದ್ದೆಗೆ ನೀರು, ಆಹಾರ ಹಾಗೂ ಹಣ್ಣು ನೀಡಿ, ಸಂತೈಸಿ ಮಾನವೀಯತೆ ಮೆರೆದರು. 

ನಂತರ ವೃದ್ದೆಯನ್ನು ನೀವು ಇಲ್ಲಿಗೆ ಯಾಕೆ ಬಂದಿದ್ದೀರಿ ಎಂದು ವಿಚಾರಿಸಿದಾಗ ವೃದ್ದೆಯು, ನನಗೆ ಮಾಸಿಕ ಪಿಂಚಣಿ ಬರುತ್ತಿಲ್ಲವೆಂದು ತಿಳಿಸಿದ್ದಾರೆ. ಅಲ್ಲದೇ, ಜೀವನ ಕಷ್ಟದಲ್ಲಿರುತ್ತದೆ ಎಂದು ಹೇಳಿದಾಗ ಕೂಡಲೇ ಉಪ ತಹಶೀಲ್ದಾರ್ ರವಿ ಅವರು, ನಾಡ ಕಛೇರಿಗೆ ಹೋಗಿ ದಾಖಲೆ ಪರಿಶೀಲನೆ ಮಾಡಿದಾಗ, 2018 ರಿಂದ ಈವರೆಗೂ ಮಾಸಿಕ ಪಿಂಚಣಿ ಹಣ ಅಂಚೆ ಕಚೇರಿಯಲ್ಲಿರುವ ಅಜ್ಜಿಯ ಖಾತೆಗೆ ಜಮಾ ಆಗಿದೆ ಎಂದು ಗೊತ್ತಾಗುತ್ತದೆ.  ಕೂಡಲೇ ಅಂಚೆ ಇಲಾಖೆಯ ವರಿಗೆ ಕರೆ ಮಾಡಿ, ವೃದ್ಧೆಗೆ ಪಿಂಚಣಿಯನ್ನು ಅವರ ಮನೆಯ ಬಾಗಿಲಿಗೆ ಹೋಗಿ ತಲುಪಿಸು ವಂತೆ ಸೂಚನೆ ನೀಡಿದರು. 

ನಂತರ ವೃದ್ಧೆಯನ್ನು ಆಟೋದಲ್ಲಿ  ಆದಾಪುರ ಗ್ರಾಮಕ್ಕೆ ಕಳುಹಿಸಿಕೊಟ್ಟರು. ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್ ಹಾಗೂ ಕುಂಬಳೂರು ಗ್ರಾಮ ಆಡಳಿತ ಅಧಿಕಾರಿ ಶ್ರೀಧರ್ ಮೂರ್ತಿ, ಕುಣೆಬೆಳಕೆರೆ ಗ್ರಾಮ ಆಡಳಿತ ಅಧಿಕಾರಿ ದೇವರಾಜ್, ಎಳೆಹೊಳೆ ಗ್ರಾಮ ಆಡಳಿತ ಅಧಿಕಾರಿ ಬಸವರಾಜ್ ಹಾಗೂ ಗ್ರಾಮ ಸಹಾಯಕರಾದ  ಕುಂಬಳೂರು ಮಾರುತಿ ಮತ್ತು ಎಳೆಹೊಳೆ ರಾಮಪ್ಪ ಈ ಸಂದರ್ಭದಲ್ಲಿ ಹಾಜರಿದ್ದು ಸಹಕರಿಸಿದರು.

error: Content is protected !!