ನದಿಯಲ್ಲಿ ಮುಳುಗಿ ಇಬ್ಬರು ಸಹೋದರ ಬಾಲಕರ ಸಾವು

ನದಿಯಲ್ಲಿ ಮುಳುಗಿ ಇಬ್ಬರು ಸಹೋದರ ಬಾಲಕರ ಸಾವು

ಹರಿಹರ, ಮಾ.25- ನಗರದ ಗುತ್ತೂರು ಬಳಿ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ನದಿಹರಳಹಳ್ಳಿ ಗ್ರಾಮದ ಇಬ್ಬರು ಬಾಲಕರು ಗುಂಡಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.  

ನದಿಹರಳಹಳ್ಳಿ ಗ್ರಾಮದ ರೇಖಾ ಮತ್ತು ಮಂಜುನಾಥ್ ಎಂಬುವವರ ಇಬ್ಬರು ಮಕ್ಕಳಾದ  ಬಸವರಾಜ (12) ಮತ್ತು ನಾಗರಾಜ್ (10) ನಿನ್ನೆ   ಮಧ್ಯಾಹ್ನ ಕಟಿಂಗ್ ಮಾಡಿಸಿಕೊಂಡು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲಿಕ್ಕೆ ಬಂದಿದ್ದಾರೆ. ಆದರೆ ನದಿಯಲ್ಲಿ ಬಹಳಷ್ಟು ಕಡೆಗಳಲ್ಲಿ ಗುಂಡಿಗಳು ಇದ್ದು ಅವುಗಳ ಅರಿವು ಇಲ್ಲದೇ ನದಿಯಲ್ಲಿ ಇಳಿದ ಬಾಲಕರು  ಗುಂಡಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆಂದು ವರದಿಯಾಗಿದೆ. 

ನಿನ್ನೆ ರಾತ್ರಿಯೇ ಶವಗಳನ್ನು  ನದಿಯ ದಂಡೆಯ ಮೇಲೆ ಇಟ್ಟುಕೊಂಡು,  ನದಿಹರಳಹಳ್ಳಿ ಗ್ರಾಮಸ್ಥರ ಜೊತೆಗೆ ಕುಟುಂಬದ ಸದಸ್ಯರು ಪ್ರತಿಭಟನೆ ನಡೆಸಿದರು. ಅಕ್ರಮ ಮರಳುಗಾರಿಕೆಯಿಂದಾಗಿ ನದಿಯಲ್ಲಿ ಬಾಲಕರು  ಗುಂಡಿಯಲ್ಲಿ ಮುಳುಗಿ ಮರಣ ಹೊಂದಿದ್ದಾರೆ  ಆದ್ದರಿಂದ ಕೂಡಲೇ ಸರ್ಕಾರ  ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಗ್ರೇಡ್ 2 ತಹಶೀಲ್ದಾರ್ ಶಶಿಧರಯ್ಯ, ಸಿಪಿಐ ಸುರೇಶ್ ಸರಗಿ, ಗುತ್ತೂರು ಪೊಲೀಸ್ ಠಾಣೆ ಪಿಎಸ್ಐ ಮಂಜುನಾಥ್ ಇತರರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ನೊಂದಂತಹ ಕುಟುಂಬಕ್ಕೆ ಸಾಂತ್ವನ ಹೇಳುವುದೊಂದಿಗೆ ಘಟನೆಯ ಬಗ್ಗೆ ಸರ್ಕಾರದ ಗಮನಕ್ಕೆ ತಂದು, ಆದಷ್ಟು ಬೇಗನೆ ಪರಿಹಾರ ಕೊಡಿಸಲಾಗುತ್ತದೆ ಎಂದು ಭರವಸೆ ನೀಡಿದ ನಂತರ, ನದಿಹರಳಹಳ್ಳಿ ಗ್ರಾಮಸ್ಥರು ಮತ್ತು ಕುಟುಂಬದ ಸದಸ್ಯರು ಮಕ್ಕಳ ಅಂತ್ಯಕ್ರಿಯೆ ಮಾಡುವುದಕ್ಕೆ ಮುಂದಾದರು.  

ಮಂಜುನಾಥ್ ಮತ್ತು ರೇಖಾ ದಂಪತಿಗೆ ಇಬ್ಬರು ಗಂಡು, ಒಂದು ಹೆಣ್ಣು ಮಗು ಇದ್ದು, ಅದರಲ್ಲಿ  ಇಬ್ಬರು ಮಕ್ಕಳೂ ನೀರಿನಲ್ಲಿ ಮುಳುಗಿ ಅಸುನೀಗಿದ್ದು,  ತಂದೆ-ತಾಯಿಗಳ  ರೋಧನ ಮುಗಿಲು ಮುಟ್ಟುವಂತಿತ್ತು.

ಮುಖಂಡರಾದ  ಹನುಮಂತಗೌಡ ಚೆನ್ನಗೌಡ್ರು ವಕೀಲ, ಮಂಜುನಾಥ್, ನಾಗರಾಜಪ್ಪ, ಗಂಗಾಧರ ಬೂದನೂರು, ಕಿರಣ್ ಬುಳ್ಳನಗೌಡ್ರು, ಎನ್.ಬಿ. ಮುತ್ತು, ಚಂದ್ರಪ್ಪ ಬೇಡರ್, ರೈತ ಸಂಘದ ಮುಖಂಡರಾದ ಮಾಕನೂರು ಈರಣ್ಣ ಹಲಗೇರಿ, ರವೀಂದ್ರ ಗೌಡ ಪಾಟೀಲ್ ಇತರರು ಹಾಜರಿದ್ದರು. ಪೊಲೀಸ್ ಸಿಬ್ಬಂದಿಗಳಾದ ಲಿಂಗರಾಜ್, ಕರಿಯಪ್ಪ, ಸಿದ್ದೇಶ್ ಇತರರು ಹಾಜರಿದ್ದರು.   

ತಾತ್ಕಾಲಿಕ ಪರಿಹಾರ: ಅಕ್ರಮ ಮರಳುಗಾರಿಕೆಯಿಂದಾಗಿಯೇ ಇಬ್ಬರು ಮಕ್ಕಳು ಮರಣ ಹೊಂದುವುದಕ್ಕೆ ಕಾರಣವಾಗಿದೆ. ಹಾಗಾಗಿ ಕುಟುಂಬದ ಸದಸ್ಯರಿಗೆ ಸೂಕ್ತ ಪರಿಹಾರವನ್ನು ಕೊಡಬೇಕು ಎಂದು ನದಿಯ ದಂಡೆಯ ಮೇಲೆ ಎರಡು ಮಕ್ಕಳ ಶವವನ್ನು ಇಟ್ಟು ಪ್ರತಿಭಟನೆ ಮಾಡಿದ ಪರಿಣಾಮ ಪೊಲೀಸ್ ಇಲಾಖೆಯ ಅಧಿಕಾರಿಗಳು ನೊಂದಂತಹ ಕುಟುಂಬಕ್ಕೆ 7 ಲಕ್ಷ ರೂಪಾಯಿ ತಾತ್ಕಾಲಿಕ ಪರಿಹಾರದ ಜೊತೆಗೆ ಅಂತ್ಯಕ್ರಿಯೆ ಖರ್ಚಿಗೆ 25 ಸಾವಿರ ರೂಪಾಯಿ ಕೊಡುವ ಮೂಲಕ ಮಾನವೀಯತೆ ಮೆರೆದ ಘಟನೆ ನಡೆಯಿತು.

error: Content is protected !!