ಮಲೇಬೆನ್ನೂರು, ಮಾ.20- ಪಟ್ಟಣದಲ್ಲಿ ಗ್ರಾಮದೇವತೆಗಳಾದ ಶ್ರೀ ಏಕನಾಥೇಶ್ವರಿ, ಕೋಡಿ ಮಾರೇಶ್ವರಿ ಮತ್ತು ಹಟ್ಟಿ ದುರ್ಗಾಂಬಿಕೆ ಅಮ್ಮನವರ ಜಾತ್ರಾ ಮಹೋತ್ಸವವು ಮಂಗಳವಾರ ಮತ್ತು ಬುಧವಾರ ಸಂಭ್ರಮದಿಂದ ಜರುಗಿತು.
ಮಂಗಳವಾರ ತಡರಾತ್ರಿಯಿಂದ ಆರಂಭವಾದ ಗ್ರಾಮದೇವತೆ ರಥದ ಮೆರವಣಿಗೆಯು ಬುಧವಾರ ಬೆಳಗಿನ ಜಾವ ಊರ ಹೊರಗಿನ ದೇವಸ್ಥಾನಕ್ಕೆ ವೈಭವದೊಂದಿಗೆ ಬಂದು ನೆಲೆಗೊಂಡಿತು.
ನಂತರ ಹಟ್ಟಿ ದುರ್ಗಾಂಬಿಕೆ ದೇವಸ್ಥಾನದಿಂದ ಘಟೆ ಬಂದ ನಂತರ, ಏಕನಾಥೇಶ್ವರಿ ಅಮ್ಮನವರ ಸಮ್ಮುಖದಲ್ಲಿ ಹಿಟ್ಟಿನ ಕೋಣನ ಬಲಿ ನೀಡಿ, ಅಮ್ಮನವರಿಗೆ ಪೂಜೆ, ಮಂಗಳಾರತಿ ಮಾಡಲಾಯಿತು. ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಭಕ್ತರು ಬೇವಿನ ಉಡುಗೆ, ಉರುಳು ಸೇವೆ, ಬಾಯಿ ಬೀಗ, ದೀಡು ನಮಸ್ಕಾರ ಸೇರಿದಂತೆ ಇತ್ಯಾದಿ ಸೇವೆ ಮತ್ತು ಹರಕೆಗಳನ್ನು ದೇವಿಗೆ ಅರ್ಪಿಸಿದರು. ಮಹಿಳೆಯರು ಸರದಿ ಸಾಲಿನಲ್ಲಿ ಬಂದು ಅಮ್ಮನವರಿಗೆ ಉಡಿ ತುಂಬಿ ಸಕಲ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು.
ಬಾಡೂಟ : ಬುಧವಾರ ಮಧ್ಯಾ ಹ್ನದಿಂದಲೇ ಪಟ್ಟಣದ ಮಾಂಸಹಾರಿ ಜನರ ಮನೆಗಳಲ್ಲಿ ಬಾಡೂಟದ ಸಂಭ್ರಮ ಜೋರಾಗಿತ್ತು. ಸಂಜೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪಟ್ಟಣ ಬಾಡೂಟಕ್ಕೆ ಬಂದಿದ್ದ ಬಂಧು-ಮಿತ್ರರಿಂದ ತುಂಬಿ ತುಳುಕಿತು. ಗುರುವಾರ ಕೂಡಾ ಬಾಡೂಟ ನಡೆಯಲಿದೆ. ಮೂಲಗಳ ಪ್ರಕಾರ ಸುಮಾರು 2 ಸಾವಿರಕ್ಕೂ ಹೆಚ್ಚು ಕುರಿಗಳನ್ನು ಹಬ್ಬಕ್ಕಾಗಿ ಪಟ್ಟಣದ ಜನತೆ ತಂದಿದ್ದರು ಎನ್ನಲಾಗಿದೆ.
ನೀರಿನ ತೊಂದರೆ : ಭದ್ರಾ ನಾಲೆಯಲ್ಲಿ ನೀರಿಲ್ಲದಿರುವುದು ಹಬ್ಬಕ್ಕೆ ತೊಂದರೆಯುಂಟಾಯಿತು. ಹಬ್ಬಗಳ ನಿಮಿತ್ತ್ಯ ರಸ್ತೆಗಳಿಗೆ ನೀರು ಹಾಕದ ಕಾರಣ ರಿಪೇರಿ ಆದ ರಸ್ತೆಗಳಲ್ಲಿ ಧೂಳು ಕೂಡಾ ಹೆಚ್ಚಾಗಿತ್ತು.
ಹುಲುಸು : ಗ್ರಾಮದೇವತೆ ಹಬ್ಬದ ಅಂಗವಾಗಿ ಶುಕ್ರವಾರ ಬೆಳಿಗ್ಗೆ 8.45 ರಿಂದ 9.30 ರವರೆಗೆ ಪಟ್ಟಣದಲ್ಲಿ ಹುಲುಸು ಹೊಡೆಯುವ ಕಾರ್ಯಕ್ರಮ ಜರುಗಲಿದೆ.