ಕೊಟ್ಟೂರು, ಮಾ. 20 – ಸದಾ ಹಣದ ಅಲಂಕಾರದ ದೇವತೆ ಎಂದೇ ಪ್ರಸಿದ್ಧವಾದ ಕೊಟ್ಟೂರು ತಾಲ್ಲೂಕಿನ ಗಾಣಗಟ್ಟೆ ಮಾಯಮ್ಮ ದೇವಿಯ ರಥೋತ್ಸವ ಬುಧವಾರ ಸಂಜೆ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ವಿಜೃಂಭಣೆಯಿಂದ ನೆರವೇರಿತು.
ಆಂಧ್ರಪ್ರದೇಶ ಸೇರಿದಂತೆ ರಥೋತ್ಸವದ ಮುಂಚೆ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಮತ್ತಿತರ ಕಡೆಯಿಂದ ಭಕ್ತರು ರಥೋತ್ಸವ ದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಇದರೊಂದಿಗೆ ರಥೋತ್ಸವ ವೀಕ್ಷಣೆಗೆ ಹರಕೆ ಹೊತ್ತು ಕೆಲ ಭಕ್ತರು ಕೊಟ್ಟೂರು ಮತ್ತಿತರ ಕಡೆಗಳಿಂದ ಪಾದಯಾತ್ರೆ ಮೂಲಕ ಆಗಮಿಸಿದ್ದರು.
ವಾದ್ಯಗಳೊಂದಿಗೆ ರಥದ ಬಳಿ ಪಲ್ಲಕ್ಕಿ ಮೆರವಣಿಗೆಯೊಂದಿಗೆ ತಂದ ಪೂಜಾ ಬಳಗದವರು ರಥದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ದೇವಿಯ ಪಟದ ಹರಾಜು ಪ್ರಕ್ರಿಯೆ ನಡೆಯಿತು. ದಾವಣಗೆರೆ ಮಹೇಶ ಅವರು ಮುಕ್ತಿ ಬಾವುಟ ಪಟಾಕ್ಷಿಯನ್ನು 301101 ರೂ.ಗಳಿಗೆ ಕೂಗಿ ಪಟಾಕ್ಷಿಯನ್ನು ಪಡೆಯುವಲ್ಲಿ ಯಶಸ್ವಿಯಾದರು.
ರಾಜ್ಯದ ಉಳಿದ ಎಲ್ಲಾ ದೇವರ ರಥಗಳನ್ನು ಭಕ್ತರು ಮಿಣಿ ಮೂಲಕ ಎಳೆದೊಯ್ದರೆ ಗಾಣಗಟ್ಟೆ ಮಾಯಮ್ಮ ದೇವಿಯ ರಥವನ್ನು ಯಾವುದೇ ಮಿಣಿ ಬಳಸದೆ ಭಕ್ತರು ತಳ್ಳುವ ಮೂಲಕ ರಥವನ್ನು ಎಳೆದೊಯ್ದರು. ರಥ ಪಾದಗಟ್ಟೆವರೆಗೆ ಮುಂದುವರೆದು ನಂತರ ಮೂಲ ಸ್ಥಾನಕ್ಕೆ ಬಂದು ತಲುಪಿತು. ರಥ ಸಾಗುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರು ಬಾಳೆಹಣ್ಣು, ಉತ್ತುತ್ತಿ ಮತ್ತಿತರಗಳನ್ನು ಎಸೆದು ದೇವಿಗೆ ನಮಿಸಿದರು.