ಶಿವರಾತ್ರಿ ಜಾಗರಣೆಯಲ್ಲಿ `ಮೋಜು – ಮಸ್ತಿ’ ಬೇಸರದ ಸಂಗತಿ

ಶಿವರಾತ್ರಿ ಜಾಗರಣೆಯಲ್ಲಿ `ಮೋಜು – ಮಸ್ತಿ’ ಬೇಸರದ ಸಂಗತಿ

ಹಿರೇಕಲ್ಮಠದ `ಸಂಸ್ಕೃತಿ-ಸಂಸ್ಕಾರ’ ಕಾರ್ಯಕ್ರಮದಲ್ಲಿ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಕಳವಳ

ಹೊನ್ನಾಳಿ,ಮಾ.18- ಪ್ರತಿಯೊಂದು ಹಬ್ಬಗಳ ಆಚರಣೆ ಹಿನ್ನೆಲೆಯನ್ನು ಸರಿಯಾಗಿ ತಿಳಿದುಕೊಂಡು ಹಬ್ಬಗಳನ್ನು ಸಂಪ್ರದಾಯಬದ್ಧವಾಗಿ ಆಚರಣೆ ಮಾಡಬೇಕು ಎಂದು ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ಪಟ್ಟಣದ ಹಿರೇಕಲ್ಮಠದಲ್ಲಿ ಶ್ರೀ ಚನ್ನಪ್ಪಸ್ವಾಮಿ ಬೆಳ್ಳಿ ರಥೋತ್ಸವ, ಸಂಸ್ಕೃತಿ-ಸಂಸ್ಕಾರ ಹಾಗೂ ಶಿವರಾತ್ರಿ ಅಮಾವಾಸ್ಯೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಇತ್ತೀಚೆಗೆ ಶಿವರಾತ್ರಿ ಹಬ್ಬದ ಜಾಗರಣೆ ಸಮಯದಲ್ಲಿ ಯುವ ಸಮೂಹ ಶಿವನ ಧ್ಯಾನ, ಜಾಗರಣೆ, ಭಜನೆ, ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗದೇ ಮೋಜು-ಮಸ್ತಿ ಮಾಡುತ್ತಾ, ಇಸ್ಪೀಟ್, ಕುಡಿತ, ಸಿನಿಮಾ ನೋಡುವುದರ ಮೂಲಕ ಆಚರಣೆಗೆ ಮುಂದಾಗುತ್ತಿರುವುದು ಬೇಸರ ತಂದಿದೆ ಎಂದರು.

ನಮ್ಮ ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಯುವ ಸಮೂಹ ಮರೆಯಬಾರದು. ಈ ನಿಟ್ಟಿನಲ್ಲಿ ಮನೆಯ ಹಿರಿಯರು ಗಮನಹರಿಸಬೇಕು ಎಂದು ದೃಷ್ಟಾಂತಗಳ ಮೂಲಕ ವಿವರಿಸಿದರು.

ಲಿಂಗೈಕ್ಯ ಶ್ರೀಗಳ ಸಂಕಲ್ಪದಂತೆ ಶ್ರೀಮಠದಲ್ಲಿ ಚನ್ನಪ್ಪಸ್ವಾಮಿ ಜನಕಲ್ಯಾಣ ಟ್ರಸ್ಟ್ ಪ್ರಾರಂಭಿಸಿ ಅದರ ಮೂಲಕ 100 ಬೆಡ್ ಆಸ್ಪತ್ರೆ, ನರ್ಸಿಂಗ್, ಫಾರ್ಮಸಿ ಕಾಲೇಜ್, ಸಿಬಿಎಸ್‍ಇ ವಸತಿಯುತ ಶಾಲೆ, ಚನ್ನಪ್ಪ ಸ್ವಾಮಿಗಳ ಸುವರ್ಣ ಮೂರ್ತಿ, ಕೋಟಿ ದೀಪೋತ್ಸವ, ಕೋಟಿ ಬಿಲ್ವಾರ್ಚನೆಗಳನ್ನು ಶ್ರೀ ಮಠದ ಭಕ್ತಾದಿಗಳ ಶ್ರೇಯೋಭಿವೃದ್ಧಿಗಾಗಿ ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ಬರಗಾಲವಿರುವ ಪ್ರಯುಕ್ತ ಎಲ್ಲಾ ಯೋಜನೆ ಗಳನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದರು.

ಸನ್ಮಾನ ಸ್ವೀಕರಿಸಿ ಡಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್. ಸುರೇಂದ್ರಗೌಡ ಮಾತನಾಡಿ, ವಿದೇಶಿಗರು ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳಿಗೆ ಮಾರುಹೋಗಿ ಅವುಗಳನ್ನು ಅನುಕರಣೆ ಮಾಡುತ್ತಿದ್ದರೆ ನಮ್ಮ ಭಾರತೀಯರು ಮಾತ್ರ ವಿದೇಶಿಗರ ಸಂಸ್ಕೃತಿ, ಆಚಾರ-ವಿಚಾರಗಳನ್ನು ಅನುಕರಣೆ ಮಾಡುತ್ತಿ ರುವುದು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದ್ದು ಇದು ಒಳ್ಳೆಯ ಬೆಳವಣಿಗೆಯಲ್ಲವೆಂದು ಆತಂಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕ ಚನ್ನೇಶ್ ಜಕ್ಕಾಳಿ ಅವರನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು.   ಚನ್ನಪ್ಪ ಸ್ವಾಮಿ ಗಾನ ಕಲಾ ಬಳಗ ಮತ್ತು ಸಂಸ್ಕೃತಿ-ಸಂಸ್ಕಾರ ತಂಡದ ವತಿಯಿಂದ   ಸಾಂಸ್ಕೃತಿಕ ಕಾರ್ಯಕ್ರಮಗಳು  ನಡೆದವು. ಮಠದ ವ್ಯವಸ್ಥಾಪಕ ಎಂ.ಪಿ.ಎಂ.ಚನ್ನಬಸಯ್ಯ, ಪ್ರಧಾನ ಅರ್ಚಕ ಅನ್ನದಾನಯ್ಯ ಶಾಸ್ತ್ರಿ, ಚನ್ನಪ್ಪಸ್ವಾಮಿ ವಿದ್ಯಾಪೀಠದ ನಿರ್ದೇಶಕ ಚನ್ನೇಶಯ್ಯ, ಕಾಂಗ್ರೆಸ್ ಮುಖಂಡ ರೇವಣಸಿದ್ದಪ್ಪ, ಪೂಜಾಮರಿ ಹಾಲಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!