ಹೊನ್ನಾಳಿ, ಮಾ. 17- ವಿಪಕ್ಷ ನಾಯಕ ಆರ್.ಅಶೋಕ್, ಜಿಲ್ಲಾ ಉಸ್ತುವಾರಿಗಳು ಮತ್ತು ಸಮಾಜದ ಮುಖಂಡರಾದ ಭೈರತಿ ಬಸವರಾಜ್ ಮತ್ತಿತರೆ ಪ್ರಮುಖರು ಈ ಹಿಂದೆ ಪಕ್ಷಕ್ಕಾಗಿ ದುಡಿದಿದ್ದೀರಿ ಮತ್ತೆ ತಾವು ಪಕ್ಷಕ್ಕೆ ಮರಳಬೇಕೆಂದು ಕರೆ ನೀಡಿದ್ದರ ಹಿನ್ನೆಲೆಯಲ್ಲಿ ಶುಕ್ರವಾರ ದಾವಣಗೆರೆ ಕಾರ್ಯಕ್ರಮದಲ್ಲಿ ಬಿಜೆಪಿಗೆ ಮರಳಿದ್ದಾಗಿ ಜಿ.ಪಂ. ಮಾಜಿ ಸದಸ್ಯ ಎಂ.ಆರ್.ಮಹೇಶ್ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕರು ತಮ್ಮ ಬೆಂಬಲಿಗರ ಮೂಲಕ ನಾನು ವಿಧಾನಸಭಾ ಕ್ಷೇತ್ರದ ಪ್ರತಿಸ್ಪರ್ಧಿಯಾಗುತ್ತೇನೆ ಎಂಬ ಕಾರಣಕ್ಕೆ ಬಿಜೆಪಿ ಮುಖಂಡರುಗಳಿಂದ ಪಕ್ಷ ಬಿಡುವಂತೆ ತೇಜೋವಧೆ ಮಾಡಿದ್ದು, ನನ್ನನ್ನು ಪಕ್ಷದಲ್ಲಿ ಸರಿಯಾಗಿ ನಡೆಸಿಕೊಳ್ಳದ ಕಾರಣ ಅನಿವಾರ್ಯ ಕಾರಣಗಳಿಂದ ಪಕ್ಷ ತೊರೆಯಬೇಕಾಗಿ ಬಂದಿದ್ದು, ಇದೀಗ ದೇಶಕ್ಕಾಗಿ, ಮೋದಿಯವರಿಗಾಗಿ ಮತ್ತೆ ಪಕ್ಷ ಸೇರಿದ್ದೇನೆ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ ಅವರಿಗೆ ಲೋಕಸಭಾ ಟಿಕೆಟ್ ತಪ್ಪಿಸುವ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ಕೆಲವರು ಗೊಂದಲ ಸೃಷ್ಟಿ ಮಾಡುತ್ತಾ ಗುಂಪುಗಾರಿಕೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈಗಾಗಲೇ ಯಾರೋ ಮಾಡಿದ ತಪ್ಪಿಗೆ ತಾಲ್ಲೂಕಿನಲ್ಲಿ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದು, ಯಾವುದೇ ಕಾರಣಕ್ಕೂ ಲೋಕಸಭಾ ಕ್ಷೇತ್ರವೂ ಕೈ ತಪ್ಪದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.
ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಎ.ಬಿ. ಹನುಮಂತಪ್ಪ ಮಾತನಾಡಿ, ಬರುವ ಬುಧವಾರ ಪಟ್ಟಣದಲ್ಲಿ ಪಕ್ಷದ ಕಚೇರಿ ಉದ್ಘಾಟನೆಯನ್ನು ಲೋಕಸಭಾ ಚುನಾವಣಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ನೆರವೇರಿಸಲಿದ್ದು, ಜಿಲ್ಲೆಯಲ್ಲಿ ಇರುವ ಗೊಂದಲಗಳನ್ನು ಇನ್ನು 2-3 ದಿನಗಳಲ್ಲಿ ಬಿ.ಎಸ್. ಯಡ್ಯೂರಪ್ಪ ಅವರ ನೇತೃತ್ವದಲ್ಲಿ ಸಭೆ ಕರೆದು ಸಮಸ್ಯೆ ಬಗೆಹರಿಸಿ ಎಲ್ಲಾ ಗೊಂದಲಗಳಿಗೆ ಇತಿಶ್ರೀ ಹಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಜಿ.ಪಂ. ಮಾಜಿ ಉಪಾಧ್ಯಕ್ಷ ಕೆ.ವಿ. ಚನ್ನಪ್ಪ ಮಾತನಾಡಿ, ನಾಳೆ ದಿನಾಂಕ 18 ರಂದು ಶಿವಮೊಗ್ಗ ನಗರದಲ್ಲಿ ನಡೆಯುವ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಬಿಜೆಪಿ ಕಾರ್ಯಕರ್ತರಿಗೆ 100 ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜಣ್ಣ, ಚನ್ನೇಶ್ ಮತ್ತಿತರರು ಉಪಸ್ಥಿತರಿದ್ದರು.