ಮಲೇಬೆನ್ನೂರಿನಲ್ಲಿ 19ರಂದು ಅಮ್ಮನ ಹಬ್ಬ

ಮಲೇಬೆನ್ನೂರಿನಲ್ಲಿ 19ರಂದು ಅಮ್ಮನ ಹಬ್ಬ

ಇಂದು ಕಂಕಣಧಾರಣೆಯೊಂದಿಗೆ ಹಬ್ಬಕ್ಕೆ ಚಾಲನೆ

ದಾವಣಗೆರೆ – ಮಲೇಬೆನ್ನೂರಿನಲ್ಲಿ ಏಕಕಾಲಕ್ಕೆ ಹಬ್ಬ ಇರುವುದರಿಂದ ಭದ್ರಾ ನಾಲೆಗೆ ತಕ್ಷಣ ನೀರು ಹರಿಸಲು ಮನವಿ

ಮಲೇಬೆನ್ನೂರು, ಮಾ.15- ಪಟ್ಟಣದ ಗ್ರಾಮದೇವತೆಗಳಾದ ಏಕನಾಥೇಶ್ವರಿ, ಕೋಡಿ ಮಾರೇಶ್ವರಿ ಮತ್ತು ಹಟ್ಟಿ ದುರ್ಗಾಂಬಿಕೆ ಅಮ್ಮನವರ ಜಾತ್ರಾ ಮಹೋತ್ಸವವನ್ನು (ಅಮ್ಮನ ಹಬ್ಬ) ನಾಳೆ ದಿನಾಂಕ 16 ರಿಂದ 22 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಉತ್ಸವ ಸಮಿತಿಯ ಭರಮಳ್ಳಿ ಭರಮಗೌಡ್ರು ತಿಳಿಸಿದರು.

ಇಲ್ಲಿನ ಏಕನಾಥೇಶ್ವರಿ, ಕೋಡಿ ಮಾರೇಶ್ವರಿ ದೇವಸ್ಥಾನದಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ನಾಳೆ ಶನಿವಾರ ರಾತ್ರಿ 9 ಗಂಟೆಗೆ ಶ್ರೀ ಮಹಾಗಣಪತಿ ಪೂಜೆಯೊಂದಿಗೆ ದೇವತೆಗಳಿಗೆ ಕಂಕಣಧಾರಣೆ ಮಾಡಲಾಗುವುದು. 

ದಿನಾಂಕ 17ರ ಭಾನುವಾರ ಮತ್ತು 18ರ ಸೋಮವಾರ ಹಾಗೂ 19ರ ಮಂಗಳವಾರ ಬೆಳಿಗ್ಗೆ ಮಹಾಗಣಪತಿ ಪೂಜೆ, ಕುಂಕುಮಾರ್ಚನೆ, ಸಣ್ಣ ಉತ್ಸವ, ಬಲಿದಾನದೊಂದಿಗೆ ಪರಶುರಾಮನ ಉಚ್ಛಾಯವು ಪಟ್ಟಣದ ರಾಜ ಬೀದಿಗಳಲ್ಲಿ ಜರುಗಲಿದೆ.

ದಿನಾಂಕ 19ರ ಮಂಗಳವಾರ ರಾತ್ರಿ 10 ಗಂಟೆಯಿಂದ ಗ್ರಾಮದೇವತೆ ಏಕನಾಥೇಶ್ವರಿ ರಥವು ಕೋಡಿಮಾರೇಶ್ವರಿ ದೇವಿಯ ಜೊತೆಗೂಡಿ ಊರ ಒಳಗಿನ ದೇವಸ್ಥಾನದಿಂದ ಮೆರವಣಿಗೆಯು ರಾಜಬೀದಿಗಳಲ್ಲಿ ದಿನಾಂಕ 20ರ ಬುಧವಾರ  ಬೆಳಗಿನ ಜಾವದವರೆಗೂ ನಡೆದು ನಂತರ ಊರ ಹೊರಗಿನ ದೇವಸ್ಥಾನಕ್ಕೆ ಹೋಗಿ ನೆಲೆಗೊಳ್ಳುವುದು.

ನಂತರ ಹಟ್ಟಿ ದುರ್ಗಾಂಬಿಕೆ ದೇವಸ್ಥಾನದಿಂದ ಘಟೆ ಬಂದ ನಂತರ ಹಿಟ್ಟಿನ ಕೋಣನ ಬಲಿ ನೀಡಿ, ದೇವಿಗೆ ಮಂಗಳಾರತಿ ಪೂಜೆ ಮಾಡಲಾಗುವುದು.ನಂತರ ವಿವಿಧ ಹರಕೆ ಸೇವೆಗಳು ಬುಧವಾರ ಬೆಳಿಗ್ಗೆಯಿಂದ ಸಂಜೆವರೆಗೂ ದೇವಸ್ಥಾನದ ಬಳಿ ನಡೆಯಲಿವೆ. ಅಲ್ಲದೇ, ಇದೇ ದಿನ ಬೆಳಗ್ಗೆಯಿಂದ ಅಮ್ಮನವರಿಗೆ ಚಿನ್ನ-ಬಣ್ಣ ಒಪ್ಪಿಸಿ, ಉಡಿ ತುಂಬುವ ಕಾರ್ಯಕ್ರಮ ಮತ್ತು ಸಂಜೆ ಪ್ರಸಿದ್ಧ ಹಾಸ್ಯಗಾರರಿಂದ ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಭರಮಳ್ಳಿ ಭರಮಗೌಡ್ರು ವಿವರಿಸಿದರು.

ದಿನಾಂಕ 22ರ ಶುಕ್ರವಾರ ಬೆಳಿಗ್ಗೆ 8.45 ರಿಂದ 9.30 ರವರೆಗೆ ಪಟ್ಟಣದಲ್ಲಿ ಹುಲುಸು ಹೊಡೆಯಲಾಗುವುದೆಂದು ಮುಖಂಡ ಪೂಜಾರ್ ಬಸಪ್ಪ ತಿಳಿಸಿದರು.

ಪಟ್ಟಣದಲ್ಲಿ 5 ವರ್ಷಗಳ ಬಳಿಕ ಅಮ್ಮನ ಹಬ್ಬ ಆಚರಿಸುತ್ತಿದ್ದು, ಈ ವೇಳೆ ಪಟ್ಟಣದಲ್ಲಿ ಯಾರೂ ಹೋಳಿ-ಕಾಮನ ಹಬ್ಬ ಆಚರಿಸುವಂತಿಲ್ಲ ಎಂದು ಕೆ.ಜಿ.ಕೊಟ್ರೇಶಪ್ಪ ಸ್ಪಷ್ಟಪಡಿಸಿದರು.

ಕಲಾ-ಮೇಳ ಭಾಗಿ : ಮಂಗಳವಾರ ರಾತ್ರಿ ಜರುಗುವ ಅಮ್ಮನ ಉತ್ಸವದಲ್ಲಿ ವಿವಿಧ ಕಲಾ-ಮೇಳಗಳು ಭಾಗವಹಿಸಲಿವೆ ಎಂದು ಚಿಟ್ಟಕ್ಕಿ ನಾಗರಾಜ್ ಅವರು ತಂಡಗಳ ಮಾಹಿತಿ ನೀಡಿದರು.

ನಾಲೆಗೆ ನೀರು ಹರಿಸಿ : ದಾವಣಗೆರೆ ಮತ್ತು ಮಲೇಬೆನ್ನೂರಿನಲ್ಲಿ ಮಾರ್ಚ್ 19 ಮತ್ತು 20 ರಂದು ಅಮ್ಮನ ಹಬ್ಬ ನಡೆಯುತ್ತಿರುವುದರಿಂದ ಭದ್ರಾ ಜಲಾಶಯದಿಂದ ನಾಲೆಗಳಿಗೆ ಮಾರ್ಚ್ 19ರ ಬದಲಾಗಿ ಮಾರ್ಚ್ 17 ರಿಂದಲೇ ನೀರು ಹರಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಗಮನ ಹರಿಸಬೇಕೆಂದು ಪುರಸಭೆ ಮಾಜಿ ಸದಸ್ಯ ಸುಬ್ಬಿ ರಾಜಣ್ಣ ಮನವಿ ಮಾಡಿದರು.

ಈ ವೇಳೆ ಅಮ್ಮನಿಗೆ ಬೆಣ್ಣೆಹಳ್ಳಿ ಬಸಮ್ಮ ಚನ್ನಪ್ಪ ಮತ್ತು ಮಕ್ಕಳು ಬೆಳ್ಳಿ ಗುಂಡಿನ ಹಾರಗಳನ್ನು ಸಮರ್ಪಿಸಿದರು.

ಮುಖಂಡರಾದ ಮುದೇಗೌಡ್ರ ಬಸವರಾಜಪ್ಪ, ಕೆ.ಜಿ.ಪರಮೇಶ್ವರಪ್ಪ, ಕೆ.ಪಿ.ಗಂಗಾಧರ್, ಪಿ.ಬಿ.ಬೀರಪ್ಪ, ಎ.ಕೆ.ಲೋಕೇಶ್, ಭೋವಿಕುಮಾರ್, ಕಣ್ಣಾಳ್ ಮೂರ್ತ್ಯೆಪ್ಪ, ಗೌಡ್ರ ರಂಗನಾಥ್, ಮೇದಾರ ರವಿ, ಎಕ್ಕೆಗೊಂದಿ ಕರಿಯಪ್ಪ, ಬೆಳ್ಳೂಡಿ ಸಿದ್ದಣ್ಣ, ಎಸ್.ಕರಿಬಸಪ್ಪ, ಪಾನಿಪೂರಿ ರಂಗನಾಥ್, ಸಿರಿಗೆರೆ ಪುಟ್ಟಣ್ಣ, ಉಡೇದರ ರೇವಣಸಿದ್ದಪ್ಪ, ಬೆಣ್ಣೆಹಳ್ಳಿ ಸಿದ್ದೇಶ್, ಪಿ.ಆರ್.ರಾಜು, ಹೊಸಳ್ಳಿ ಕರಿಬಸಪ್ಪ, ಬಟ್ಟೆ ಅಂಗಡಿ ವಿಶ್ವ, ಉಡೇದರ ಸಿದ್ದೇಶ್, ಓ.ಜಿ.ಪ್ರಭು, ಬೆಣ್ಣೆಹಳ್ಳಿ ಶಿವಕುಮಾರ್, ಬಣಕಾರ್ ವಿಜಯಕುಮಾರ್, ದೇವಸ್ಥಾನದ ಅರ್ಚಕರಾದ ಕೇಶವಚಾರ್, ಪ್ರಕಾಶಚಾರ್ ಸೇರಿದಂತೆ ಇನ್ನೂ ಅನೇಕರು ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!