ಭಾರತ ದೇಶಕ್ಕೆ ಜ್ಞಾನಿಗಳು, ಹೃದಯವಂತರು ಅಗತ್ಯ

ಭಾರತ ದೇಶಕ್ಕೆ ಜ್ಞಾನಿಗಳು, ಹೃದಯವಂತರು ಅಗತ್ಯ

ದಾವಣಗೆರೆ, ಮಾ. 6- ಅತ್ಯಂತ ವೇಗವಾಗಿ ಬೆಳೆಯು ತ್ತಿರುವ ಭಾರತ ದೇಶಕ್ಕೆ ಬುದ್ಧಿವಂತರ ಜೊತೆಗೆ ಜ್ಞಾನಿಗಳು, ಹೃದಯವಂತರ ಅಗತ್ಯತೆ ಇದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಮಂಜುನಾಥ್ ಹೇಳಿದರು.

ನಗರದ ಡಯಟ್ ಸಭಾಂಗಣದಲ್ಲಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ಇಂದು ಏರ್ಪಡಿಸಿದ್ದ ಚಿತ್ರಕಲಾ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದರೆ ಮಕ್ಕಳು ಬುದ್ಧಿವಂತರಾಗುವ ಜೊತೆಗೆ ಜ್ಞಾನವಂತರಾದರೆ ಹೃದಯವಂತರಾಗುತ್ತಾರೆಂದರು.

ಅತಿ ಬುದ್ಧಿವಂತಿಕೆ ದೇಶಕ್ಕೆ ಮಾರಕ. ಬುದ್ದಿವಂತಿಕೆ ಜೊತೆ ಜ್ಞಾನಿಗಳಾದರೆ ದೇಶಕ್ಕೆ ಪ್ರೇರಕರಾಗಿ ಏನನ್ನಾದರೂ ಕೊಡುಗೆ ನೀಡ ಬಲ್ಲರು. ಪಠ್ಯೇತರ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ ಮಾತ್ರವಲ್ಲದೇ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಡಯಟ್ ನಿವೃತ್ತ ಉಪ ನಿರ್ದೇಶಕ ಹೆಚ್.ಕೆ. ಲಿಂಗರಾಜ್ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ, ಆಳವಾದ ಶಿಕ್ಷಣ ನೀಡಿದಾಗ ಸುಸಂಸ್ಕೃತ, ಸೃಜನಶೀಲ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಚಿತ್ರಕಲೆಯಲ್ಲಿ ಆಸಕ್ತಿ ಮೂಡಿ ಸುವ ಅಗತ್ಯವಿದೆ. ತಾಯಿ ಬೇರುಗಳು ಗಟ್ಟಿಯಾದಷ್ಟು ಮರಗಳು ಹೆಮ್ಮರವಾಗಿ ಬೆಳೆಯುತ್ತವೆ. ಕಾರಣ ಮಕ್ಕಳಿಗೆ ಆಳವಾದ ಜ್ಞಾನ ನೀಡಬೇಕೆಂದು ಸಲಹೆ ನೀಡಿದರು.

ಮಕ್ಕಳು ಗುರುಗಳಿಗಿಂತ ಹೆಚ್ಚು ಬುದ್ಧಿವಂತಿಕೆ ಪ್ರದರ್ಶಿಸಿರುವ ಉದಾಹರಣೆಗಳು ಸಹ ಇವೆ. ಚಿತ್ರಕಲೆ ಆರಾಧಿಸುವವರಿಗೆ, ರೂಢಿಸಿಕೊಳ್ಳುವವರಿಗೆ ಪ್ರಪಂಚದಲ್ಲಿ ಸಾಧನೆ ಸಾಧ್ಯ ಎಂಬುದನ್ನು ಚಿತ್ರಕಲಾ ಶಿಕ್ಷಕರು ತೋರಿಸಿಕೊಟ್ಟಿದ್ದಾರೆ. ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರ ಹಾಕಲು ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಸೂಕ್ತ ಮಾರ್ಗದರ್ಶನ ಮಾಡಬೇಕಾಗಿದೆ ಎಂದರು.

ಡಯಟ್ ಪ್ರಾಚಾರ್ಯರಾದ ಎಸ್. ಗೀತಾ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಪಿ. ನಾಗರಾಜ್, ಸಿದ್ದೇಶಪ್ಪ ಜಿಗಣಪ್ಪರ, ಶ್ರೀನಿವಾಸಮೂರ್ತಿ, ನಾಗಭೂಷಣ, ಎ.ಮಹಾಲಿಂಗಪ್ಪ, ಶಾಂತಯ್ಯ ಪರಡಿಮಠ, ಸಿ. ನಾಗರಾಜ್, ಎಂ. ಹನುಮಂತಪ್ಪ ಮತ್ತಿತರರು ಭಾಗವಹಿಸಿದ್ದರು. 

error: Content is protected !!