ರೇವಣಸಿದ್ದೇಶ್ವರ, ಬೀರದೇವರ ಸಂಬಂಧ ಅನನ್ಯವಾದದ್ದು

ರೇವಣಸಿದ್ದೇಶ್ವರ, ಬೀರದೇವರ ಸಂಬಂಧ ಅನನ್ಯವಾದದ್ದು

ಮಲೇಬೆನ್ನೂರಿನಲ್ಲಿ ರಂಭಾಪುರಿ ಜಗದ್ಗುರುಗಳು

ಮಲೇಬೆನ್ನೂರು, ಮಾ. 5- ರಂಭಾಪುರಿ ಶ್ರೀಗಳು, ರೇವಣಸಿದ್ದೇಶ್ವರರು ಮತ್ತು ಬೀರಲಿಂಗೇಶ್ವರ ದೇವರಿಗೂ ಇರುವ ಸಂಬಂಧ ಬಹಳ ಅನನ್ಯ ಎಂದು ಬಾಳೆಹೊನ್ನೂರಿನ  ರಂಭಾಪೂರಿ ಪೀಠದ ಶ್ರೀ ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.

ಇಲ್ಲಿನ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಏರ್ಪಾಡಾಗಿದ್ದ ಬೀರದೇವರಿಗೆ ಅಭಿಷೇಕ ಪೂಜೆ ಮತ್ತು ಇಷ್ಟಲಿಂಗ ಮಹಾಪೂಜೆಯನ್ನು ನೆರವೇರಿಸಿ ನಂತರ ಜಗದ್ಗುರುಗಳು ಆಶೀರ್ವಚನ ನೀಡಿದರು.

ರಂಭಾಪುರಿ ಜಗದ್ಗುರುಗಳು ಎಲ್ಲೇ ಬರಲಿ ಅಲ್ಲಿಗೆ ಬೀರದೇವರು ಆಗಮಿಸಿ, ಗೌರವ ಸಮರ್ಪಿಸುವ ಪದ್ಧತಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ದೈವ ಶಕ್ತಿ ಬಹಳ ದೊಡ್ಡದು ಎಂಬುದಕ್ಕೆ ಈ ದಿನ ಸಾಕ್ಷಿ ಆಗಿದ್ದು, ದೇವಿ ವಾರ ಹಾಗೂ ವೀರಭದ್ರೇಶ್ವರ ದೇವರ ವಾರದ ದಿನದಂದೇ ಬೀರಪ್ಪನಿಗೆ ಅಭಿಷೇಕ ಆಗಬೇಕೆಂಬ ಸಂಕಲ್ಪ ಆಗಿತ್ತು. ಆ ಪ್ರಕಾರ ನಾವು ಇಲ್ಲಿಗೆ ಆಗಮಿಸಿ, ಅಭಿಷೇಕ ಪೂಜೆ ಹಾಗೂ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿರುವುದು ನಮಗೂ ಆತ್ಮ ಸಂತೃಪ್ತಿ ತಂದಿದೆ ಎಂದು ರಂಭಾಪುರಿ ಶ್ರೀಗಳು ಹೇಳಿದರು. 

ಮನುಷ್ಯ ಕೊಟ್ಟಿದ್ದು ಮನೆ ತನಕ, ದೇವರು ಕೊಟ್ಟಿದ್ದು ಕೊನೆತನಕ ಎಂಬುದನ್ನು ಯಾರೂ ಮರೆಯಬಾರದು. ಅಂತಹ ದೇವರನ್ನು ನಂಬದ ನಾಸ್ತಿಕರು ಅತಿಯಾದ ವೈಚಾರಿಕತೆಯನ್ನು ಬೆಳೆಸಿಕೊಂಡು ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದಾರೆ. ಶಿವ ಮತ್ತು ಶಕ್ತಿ ಎರಡು ಒಂದಾಗಿ ನಮ್ಮನ್ನು ಕಾಪಾಡುತ್ತಾ ಬಂದಿವೆ. ವೀರಶೈವ ಧರ್ಮದಲ್ಲಿ ಗುರು ಕೊಟ್ಟ ಇಷ್ಟಲಿಂಗ ಪೂಜೆಯಿಂದ ಎಲ್ಲಾ ಸಂಕಷ್ಟಗಳು ದೂರವಾಗಿ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಮೊದಲಿನಿಂದಲೂ ಇದೆ. ಆ ಕಾರಣಕ್ಕಾಗಿಯೇ ವೀರಗಂಗಾಧರ ಜಗದ್ಗುರುಗಳ ಕಾಲದಿಂದಲೂ ಇಷ್ಟಲಿಂಗ ಪೂಜೆಯನ್ನು ನಾಡಿನ ಒಳಿತಿಗಾಗಿ ಮತ್ತು ಭಕ್ತರ ಉದ್ಧಾರಕ್ಕಾಗಿ ಮಾಡುತ್ತಾ ಬಂದಿದ್ದೇವೆ ಎಂದರು.

ಈ ವರ್ಷ ನಾಡಿನಲ್ಲಿ ಮಳೆ-ಬೆಳೆ ಸಮೃದ್ಧಿಸಲಿ ಮತ್ತು ರೈತರು ಸಂತುಷ್ಟಿಗೊಳ್ಳಲಿ ಎಂದು ಪ್ರಾರ್ಥಿಸಿದ ರಂಭಾಪುರಿ ಶ್ರೀಗಳು, ಹಾಲುಮತ ಸಮಾಜದವರು ಹೊಡೆಯುವ ಡೊಳ್ಳಿನ ಶಬ್ಧ ಮೊದಲಿಗೆ ರೇವಣಸಿದ್ದೇಶ್ವರರಿಗೆ ಕೇಳುತ್ತದೆ ಎಂಬ ನಂಬಿಕೆ ಇದ್ದು, ಹಾಗಾಗಿ ಡೊಳ್ಳಿನ ಕುಣಿತದಲ್ಲಿ ಭಕ್ತಿ- ಉತ್ಸಾಹ ಇರುತ್ತದೆ ಎಂದರು.

ಈ ಸಮಾಜದ ಹಿರಿಯ ಮುತ್ಸದ್ಧಿ ಕೆ.ಪಿ. ಸಿದ್ದಬಸಪ್ಪನವರು ರಾಜಕಾರಣಿಯಾಗಿದ್ದರೂ ಧರ್ಮದ ಕಾರ್ಯಗಳಲ್ಲಿ ಹೆಚ್ಚು ತಮ್ಮನ್ನು ತಾವು ತೊಡಗಿಸಿಕೊಂಡು ಎಲ್ಲರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಶ್ರೀಗಳು ಸ್ಮರಿಸಿದರು.

ರಟ್ಟಿಹಳ್ಳಿ ಕಬ್ಬಿಣಕಂಥಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಬೀರದೇವರು ಸಂಸ್ಕೃತಿಯ ಪ್ರತೀಕವಾಗಿದ್ದು, ಅತ್ಯಂತ ಶಕ್ತಿ-ಭಕ್ತಿ ಹೊಂದಿದ್ದಾರೆ ಎಂಬುದಕ್ಕೆ ರಂಭಾಪುರಿ ಶ್ರೀಗಳು ಇಲ್ಲಿಗೆ ಬಂದಿರುವುದೇ ಸಾಕ್ಷಿ ಎಂದರು.

ಪಟ್ಟಣದ ಹುಲಿಕಂಥಿಮಠದ ಶ್ರೀ ರೇವಣಸಿದ್ದಯ್ಯ ಸ್ವಾಮೀಜಿ, ಬೀರಲಿಂಗೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಪೂಜಾರ್ ಬಸಪ್ಪ, ದೇವಸ್ಥಾನದ ಅಧ್ಯಕ್ಷ ಪೂಜಾರ್ ನಾಗಪ್ಪ, ಗೌರವಾಧ್ಯಕ್ಷ ಪೂಜಾರ್ ರೇವಣಪ್ಪ, ಹರಿಹರ ತಾ. ಕುರುಬ ಸಮಾಜದ ಅಧ್ಯಕ್ಷ ಪೂಜಾರ್ ಹಾಲೇಶಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ, ಜಿ.ಪಂ. ಮಾಜಿ ಸದಸ್ಯ ಬಿ.ಎಂ. ವಾಗೀಶಸ್ವಾಮಿ, ನಂದಿ ಬ್ಯಾಂಕ್ ಮಾಜಿ ಅಧ್ಯಕ್ಷ ಜಿಗಳಿ ಇಂದೂಧರ್, ಪೂಜಾರ್ ನಿಂಗಪ್ಪ, ಪಿ.ಬಿ. ಜಯ್ಯಪ್ಪ, ಪಿ.ಬಿ. ಬೀರಪ್ಪ, ಪಿ. ಗಂಗೆನೆಳ್ಳಪ್ಪ, ಕೆ.ಪಿ. ಸೋಮಶೇಖರ್, ಪಿ.ಹೆಚ್. ಶಿವಕುಮಾರ್, ಭಾನುವಳ್ಳಿ ಸುರೇಶ್, ಭೋವಿಕುಮಾರ್, ಬಿ. ಚಂದ್ರಪ್ಪ, ಪೂಜಾರ್ ಮಹೇಶ್, ಉಪನ್ಯಾಸಕ ಹಾಲೇಶ್, ಉದ್ಯಮಿ ಬಿ. ಮಲ್ಲಿಕಾರ್ಜುನ್, ಬಿ. ಉಮಾಶಂಕರ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ದೇವಸ್ಥಾನದ ಕಾರ್ಯದರ್ಶಿ ಕೆ.ಪಿ. ಗಂಗಾಧರ್ ಸ್ವಾಗತಿಸಿದರು. ಪುರಸಭೆ ಮಾಜಿ ಸದಸ್ಯ ಪಿ.ಆರ್. ರಾಜು ವಂದಿಸಿದರು.

error: Content is protected !!