ನ್ಯಾಮತಿ, ಫೆ.27- ತಾಲ್ಲೂಕಿನ ಜೀನಹಳ್ಳಿ ಗ್ರಾಮ ವ್ಯಾಪ್ತಿಯ ಅಕ್ಕಪಕ್ಕದ ಹಳ್ಳಿಗಳ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿ, ಬದುಕಿನ ದಾರಿ ದೀಪವಾಗಿದ್ದು, ವಿವಿಧ ಸ್ತರಗಳಲ್ಲಿನ ಹುದ್ದೆಗಳ ಕರ್ತವ್ಯ ನಿರ್ವಹಿಸಿ, ಸಮಾಜಮುಖಿಯಾಗಿ ಜೀವಿಸುವುದಕ್ಕೆ ಕಾರಣರಾದ ಗುರುಗಳನ್ನು ಇಂದು ಶಿಷ್ಯಂದಿರು ಗೌರವಿಸುತ್ತಿರುವುದು ವಿಶೇಷ ಹಾಗೂ ಇತರರಿಗೆ ಮಾದರಿಯ ಅರ್ಥಪೂರ್ಣ ಕಾರ್ಯವಾಗಿದೆ ಎಂದು ಶಿಕ್ಷಣಾಧಿಕಾರಿ ನಂಜರಾಜ್ ಹೇಳಿದರು
ಅವರು ಜೀನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ 1986ರ ಎಸ್ಸೆಸ್ಸೆಲ್ಸಿ ಹಳೇ ವಿದ್ಯಾರ್ಥಿ ಗಳಿಂದ ಗುರುಗಳಿಗೆ ಗುರು ವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾತನಾಡಿದರು. 1986 ರಲ್ಲಿ ಎಸ್ಸೆಸ್ಸೆಲ್ಸಿಯ 116 ವಿದ್ಯಾರ್ಥಿಗಳಲ್ಲಿ ಇಂದು 108 ವಿದ್ಯಾರ್ಥಿ ಗಳು ಪಾಲ್ಗೊಂಡಿದ್ದು, ಅಂದು ಹೊನ್ನಾಳಿ ತಾಲ್ಲೂಕಿಗೆ ಸೇರಿದ್ದ ಶಾಲೆಯು ತಾಲ್ಲೂಕಿನಲ್ಲಿ ಉತ್ತಮ ಫಲಿತಾಂಶ ಬರುತ್ತಿರುವುದನ್ನು ಸ್ಮರಿಸಿ, 38 ವರ್ಷಗಳ ಹಿಂದಿನ ಗುರು -ಶಿಷ್ಯರ, ಸ್ನೇಹ ಮಿಲನವನ್ನು ಸಭೆಯಲ್ಲಿ ಮಾತುಗಳ ಮೂಲಕ ಅತಿಥಿಗಳು ಜೀನ ಹಳ್ಳಿಯ `ಜೀನ್ಸ್’ ಎನ್ನುವ ಮೂಲಕ ಸಂಬಂಧ ಅಭಿಪ್ರಾಯ ಹಂಚಿಕೊಂಡಿದ್ದು ವಿಶೇಷವಾಗಿದ್ದಿತು.
ಶಾಲೆಯ ಈ ಹಿಂದಿನ ಶಿಕ್ಷಕರಾಗಿದ್ದ ಕೆ.ಬಸವರಾಜಪ್ಪ ಮಾತನಾಡಿ, ಈ ಹಿಂದೆ ನಮ್ಮೊಂದಿಗೆ ಸೇವೆ ಸಲ್ಲಿಸುತ್ತಿದ್ದ 8 ಶಿಕ್ಷಕರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಶಿಷ್ಯರ ಬಗ್ಗೆ ಇದ್ದ ನಂಬಿಕೆ ವಿಶ್ವಾಸಗಳೊಂದಿಗೆ ಶಿಕ್ಷಣ ಪಡೆದು, ಇಂದು ವೈದ್ಯ, ಇಂಜಿನಿಯಿರ್, ತಹಶೀಲ್ದಾರ್, ಶಿಕ್ಷಕ ಸೇರಿದಂತೆ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆ ಇದೆ ಎಂದು ಹೇಳಿದರು. ಸಭೆಯಲ್ಲಿ ಗುರುಗಳಾಗಿದ್ದ ಎಸ್.ಹೆಚ್.ಪರಮೇಶ್ವರಪ್ಪ, ಕೆ.ಕರಿಬಸಪ್ಪ, ಪ್ರಕಾಶ್, ತಹಶೀಲ್ದಾರ್ ಡಿ.ತೀರ್ಥಪ್ಪ, ಎಸ್.ಎಂ.ಪರಮೇಶ್ವರಪ್ಪ, ಎ.ಎಂ.ಖಟಾವಕರ್ ಮಾತನಾಡಿದರು.
ಹಳೇ ವಿದ್ಯಾರ್ಥಿ ಹಾಗೂ ಇಂದಿನ ವಿಜ್ಞಾನಿ ಡಾ. ಧನಂಜಯ್ ಹಾಗೂ ಶಿವಮೊಗ್ಗ ತಜ್ಞ ಮನೋವೈದ್ಯ ಡಾ. ಅರವಿಂದ್ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಪ್ರಗತಿ ಪರ ರೈತ ಜಿ.ಎಸ್.ಮೋಹನ್ ವಹಿಸಿದ್ದರು.
ಶಾಲಾ ಮುಖ್ಯೋಪಾಧ್ಯಾಯ ನಾಗರಾಜ್, ಎಸ್ಡಿಎಂಸಿ ಅಧ್ಯಕ್ಷ ರವಿ, ನವುಲೆ ಹಾಲೇಶ್, ವೇದಮೂರ್ತಿ, ಸುರೇಶ್ ಗೆಜ್ಜೇರಿ, ಸರ್ವ ಮಂಗಳ, ಸೇರಿದಂತೆ ಹಳೇ ವಿದ್ಯಾರ್ಥಿಗಳು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.